ನವದೆಹಲಿ: ದೇಶದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳ (ಎಂಎಸ್ ಎಂಇ) ಏಳಿಗೆ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಡಿಮೆ ಬಡ್ಡಿದರಕ್ಕೆ ಸಾಲ, ತೆರಿಗೆ ವಿನಾಯಿತಿ ಸೇರಿ ಹಲವು ವಿನಾಯಿತಿಗಳನ್ನು ನೀಡುತ್ತಿದೆ. ಇದರ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೂಡ ಎಂಎಸ್ ಎಂಇಗಳಿಗೆ ಗುಡ್ ನ್ಯೂಸ್ ನೀಡಿದೆ. ಅವಧಿಪೂರ್ವ ಸಾಲ ಮರುಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ ನೀಡಿದೆ.
ಹೌದು, ಯಾವುದೇ ಎಂಎಸ್ ಎಂಇಗಳು ಅಥವಾ ಅವುಗಳ ಮಾಲೀಕರು ಪಡೆದುಕೊಂಡ ಫ್ಲೋಟಿಂಗ್ ರೇಟ್ (ರೆಪೊ ದರ ಆಧಾರಿತ ಬಡ್ಡಿಯ ನಿಗದಿ) ಸಾಲವನ್ನು ಅವಧಿಗೆ ಮೊದಲೇ ಮರುಪಾವತಿ ಮಾಡಿದರೆ ಅದಕ್ಕೆ ಶುಲ್ಕ ವಿಧಿಸಬಾರದು ಎಂದು ಬ್ಯಾಂಕ್ ಗಳು ಮತ್ತು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ ಸೂಚನೆ ನೀಡಿದೆ. ವ್ಯಕ್ತಿಗಳು ಮತ್ತು ಎಸ್ಎಂಇ ವಲಯದ ಉದ್ದಿಮೆಗಳು ವಾಣಿಜ್ಯ ಉದ್ದೇಶಕ್ಕೆ ಈ ಬಗೆಯ ಸಾಲ ಪಡೆದಿದ್ದರೂ ಆರ್ ಬಿ ಐ ಹೊಸ ಸೂಚನೆ ಅನ್ವಯವಾಗಲಿದೆ.
ಆರ್ ಬಿ ಐ ನೀಡಿದ ಸೂಚನೆಯು, 2026ರ ನಂತರ ಪಡೆಯುವ ಅಥವಾ ನವೀಕರಿಸಿಕೊಳ್ಳುವ ಔದ್ಯಮಿಕ ಸಾಲಗಳಿಗೆ ಅನ್ವಯವಾಗಲಿದೆ. ಈಗಾಗಲೇ ಜಾರಿಯಲ್ಲಿ ಇರುವ ಮಾರ್ಗಸೂಚಿ ಪ್ರಕಾರ, ವ್ಯಕ್ತಿಗಳು ವಾಣಿಜ್ಯ ಉದ್ದೇಶ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಪಡೆದಿರುವ ಫ್ಲೋಟಿಂಗ್ ರೇಟ್ ಅವಧಿ ಸಾಲಗಳಿಗೆ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ ಬಿ ಎಫ್ ಸಿ) ಅವಧಿಪೂರ್ವ ಮರುಪಾವತಿ ಶುಲ್ಕ ಪಡೆಯುವಂತೆ ಇಲ್ಲ ಎಂದು ತಿಳಿಸಲಾಗಿದೆ.
ಆರ್ ಬಿ ಐ ಹೊಸ ಆದೇಶದಿಂದ ಎಂಎಸ್ ಎಂಇಗಳಿಗೆ ಭಾರಿ ಅನುಕೂಲವಾಗಲಿದೆ. ಸಣ್ಣ ಹಣಕಾಸು ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ಮೂರನೆಯ ಹಂತದ ಪ್ರಾಥಮಿಕ (ನಗರ) ಸಹಕಾರ ಬ್ಯಾಂಕ್ ಗಳು, ರಾಜ್ಯ ಸಹಕಾರ ಬ್ಯಾಂಕ್ ಗಳು, ಕೇಂದ್ರ ಸಹಕಾರ ಬ್ಯಾಂಕ್ ಗಳು ಮತ್ತು ಎನ್ ಬಿ ಎಫ್ ಸಿಗಳು (ಎಂಎಲ್) 50 ಲಕ್ಷ ರೂಪಾಯಿವರೆಗೆ ಅನುಮೋದನೆ ನೀಡಿರುವ ಸಾಲಕ್ಕೆ ಅವಧಿಪೂರ್ವ ಮರುವಾಪತಿ ಶುಲ್ಕ ವಿಧಿಸಲು ಅವಕಾಶ ಇಲ್ಲ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.



















