ದುಬೈ: ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ವಿಶೇಷ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಅಆಡುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಅವರಿಗೆ ಅದು 200ನೇ ಏಕದಿನ ಪಂದ್ಯವಾಗಿದೆ.
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆಡಲು ಇಳಿಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಮಾಜಿ ನಾಯಕ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್‌ಗೆ ರವೀಂದ್ರ ಜಡೇಜಾ ಸೇರ್ಪಡೆಯಾಗಿದ್ದಾರೆ.
2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಭಾರತ ತಂಡದ ಪರ ಐಸಿಸಿ ಟೂರ್ನಿಗಳಲ್ಲಿ ಜಡೇಜಾ ಆಡುತ್ತಿದ್ದಾರೆ. ಇದೀಗ ಅವರು ಏಕದಿನ ಪಂದ್ಯಗಳು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಸಂಬಂಧಿಸಿದಂತೆ ಅಪರೂಪದ ದಾಖಲೆ ಬರೆದಿದ್ದಾರೆ.,
ರವೀಂದ್ರ ಜಡೇಜಾ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಐದನೇ ಆಟಗಾರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ ಆಲ್‌ರೌಂಡರ್ ಇಲ್ಲಿಯವರೆಗೂ 240 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 200 ಒಡಿಐ ಪಂದ್ಯಗಳು ಹಾಗೂ 200 ಐಪಿಎಲ್ ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರ ಎಲೈಟ್ ಲೀಸ್ಟ್‌ನಲ್ಲಿ ಜಡೇಜಾ ಕಾಣಿಸಿಕೊಂಡಿದ್ದಾರೆ.
ಧೋನಿಗೆ ಮೊದಲ ಸ್ಥಾನ
ಈ ಪಟ್ಟಿಯಲ್ಲಿ ಎಂಎಸ್ ಧೋನಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 347 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಅವರದ್ದು. ಸಿಎಸ್‌ಕೆ ಮಾಜಿ ನಾಯಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 264 ಪಂದ್ಯಗಳನ್ನು ಆಡಿದ್ದಾರೆ.
2008ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ರವೀಂದ್ರ ಜಡೇಜಾ ಪ್ರತಿನಿಧಿಸಿದ್ದರು ಹಾಗೂ 2009ರಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜಡೇಜಾ, ಎರಡು ದಿನಗಳ ನಂತರ ಟಿ20ಐ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು.
2012ರಲ್ಲಿ ಅವರು ಇಂಗ್ಲೆಂಡ್ ವಿರುದ್ದ ಜಡೇಜಾ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2011ರ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಜಡೇಜಾ ಆಡಿಲ್ಲವಾದರೂ ಹೋದ ವರ್ಷ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಜಡೇಜಾ ಆಡಿದ್ದರು. ಆ ಬಳಿಕ ರವೀಂದ್ರ ಜಡೇಜಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಕೊಹ್ಲಿಯೂ ಇದ್ದಾರೆ ಸಾಧನೆ ಪಟ್ಟಿಯಲ್ಲಿ
2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ಇಲ್ಲಿಯವರೆಗೂ 252 ಪಂದ್ಯಗಳನ್ನು ಆಡಿದ್ದಾರೆ ಹಾಗೂ ಭಾರತದ ಪರ 298 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 269 ಏಕದಿನ ಪಂದ್ಯಗಳು ಮತ್ತು 257 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
200 ಒಡಿಐ ಪಂದ್ಯಗಳು ಹಾಗೂ 200 ಐಪಿಎಲ್ ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರು
ಎಂಎಸ್ ಧೋನಿ: 347 ಒಡಿಐ ಪಂದ್ಯಗಳು ಮತ್ತು 264 ಐಪಿಎಲ್ ಪಂದ್ಯಗಳು
ವಿರಾಟ್ ಕೊಹ್ಲಿ: 298 ಒಡಿಐ ಪಂದ್ಯಗಳು ಮತ್ತು 252 ಐಪಿಎಲ್ ಪಂದ್ಯಗಳು
ರೋಹಿತ್ ಶರ್ಮಾ: 269 ಒಡಿಐ ಪಂದ್ಯಗಳು ಮತ್ತು 257 ಐಪಿಎಲ್ ಪಂದ್ಯಗಳು
ಸುರೇಶ್ ರೈನಾ: 226 ಪಂದ್ಯಗಳು ಮತ್ತು 205 ಐಪಿಎಲ್ ಪಂದ್ಯಗಳು
ರವೀಂದ್ರ ಜಡೇಜಾ: 200 ಪಂದ್ಯಗಳು ಮತ್ತು 240 ಐಪಿಎಲ್ ಪಂದ್ಯಗಳು