ಮುಂಬೈ: ಇಹಲೋಕ ತ್ಯಜಿಸಿರುವ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಅಂತ್ಯ ಸಂಸ್ಕಾರ ನಡೆಯಿತು. ಮುಂಬೈನ ವೋರ್ಲಿಯಲ್ಲಿರುವ ಶವಾಗಾರದಲ್ಲಿ ಪಾರ್ಥಿವ ಶರೀರವನ್ನು ದಹನ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾಣಿಜ್ಯ ಸಚಿವ ಗೋಯಲ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಹಲವರು ಇದ್ದರು.
ಮಹಾರಾಷ್ಟ್ರದಲ್ಲಿ ಟಾಟಾ ಅವರ ಗೌರವಾರ್ಥವಾಗಿ ಒಂದು ದಿನದ ಶೋಕಾಚರಣೆ ಆಚರಿಸಲಾಯಿತು. 86 ವರ್ಷದ ರತನ್ ಟಾಟಾ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಧ್ಯರಾತ್ರಿ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ರತನ್ ಟಾಟಾ ಎರಡು ದಶಕಗಳ ಕಾಲ ಟಾಟಾ ಗ್ರೂಪ್ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದರು. ನೂರು ಕಂಪನಿಗಳನ್ನು ಸಮರ್ಪಕವಾಗಿ ಮುನ್ನಡೆಸಿ, ಟಾಟಾ ಬಿಸಿನೆಸ್ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು.
ಅವಿವಾಹಿತರಾಗಿರುವ ರತನ್ ಟಾಟಾಗೆ ಮಕ್ಕಳಿಲ್ಲ. ಅವರ ತಂದೆಯ ಎರಡನೇ ಪತ್ನಿಯ ಮಗನ ಮೂವರು ಮಕ್ಕಳಲ್ಲಿ ಒಬ್ಬರಿಗೆ ಟಾಟಾ ಗ್ರೂಪ್ ಚುಕ್ಕಾಣಿ ಸಿಗಬಹುದು ಎಂದು ತಿಳಿದು ಬಂದಿದೆ.