ದಾವಣಗೆರೆ: ಮಲೆನಾಡು ಹಾಗೂ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಇಲಿ ಜ್ವರದ ಕಾಟ ಶುರುವಾಗಿದೆ.
ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಜಿಲ್ಲೆಯಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, ಆತಂಕ ಮನೆ ಮಾಡುತ್ತಿದೆ. ಜಿಲ್ಲೆಯ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಪ್ರಕರಣಗಳಲ್ಲಿ ಇಲಿ ಜ್ವರದ ಪ್ರಕರಣ ಹೆಚ್ಚಾಗಿವೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
”ಜಿಲ್ಲೆಯಲ್ಲಿ ಕೇವಲ ಏಳು ತಿಂಗಳಲ್ಲಿ (2024 ಏಪ್ರಿಲ್ ತಿಂಗಳಿಂದ ನವೆಂಬರ್ ವರೆಗೆ) ಒಟ್ಟು 42 ಇಲಿ ಜ್ವರದ ಪ್ರಕರಣಗಳು ವರದಿಯಾಗಿವೆ. ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ 35 ಪ್ರಕರಣಗಳು ದಾಖಲಾಗಿವೆ. ನವೆಂಬರ್ ನಲ್ಲಿ 7 ಪ್ರಕರಣಗಳು ದಾಖಲಾಗಿವೆ.
”42 ಜನರ ಪೈಕಿ 40 ಜನರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಈಗಾಗಲೇ ಗುಣಮುಖರಾಗಿದ್ದಾರೆ. ಪ್ರಸ್ತುತ 2 ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 6 ವರ್ಷಗಳ ಪೈಕಿ ಈ ವರ್ಷವೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಜನರು ಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
“ಇಲಿ ಜ್ವರವು ಬ್ಯಾಕ್ಟೀರಿಯಾದಿಂದ ಬರುವ ಜ್ವರ. ಇಲಿ, ಹೆಗ್ಗಣಗಳು ಮಲ, ಮೂತ್ರ ಮಾಡುವುದರಿಂದ, ಅಲ್ಲದೇ ಸೋಂಕಿತ ಇಲಿ ಮುಟ್ಟಿರುವ, ಇಲಿ ಸ್ಪರ್ಶಿಸುವ ಆಹಾರ ಪದಾರ್ಥಗಳು ಸೇವಿಸುವುದರಿಂದ ಜ್ವರ ಕಾಣಿಸುತ್ತದೆ. ನೀರಿನ ಮೂಲಕ ಇಲಿ ಓಡಾಡಿದ ಸ್ಥಳದಿಂದ ಈ ಜ್ವರ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.