ಬೆಂಗಳೂರು : ವೈರಲ್ ರಾಸಲೀಲೆ ವಿಡಿಯೋ ಬಗ್ಗೆ ಸದಾಶಿವನಗರದಲ್ಲಿರುವ ಗೃಹ ಸಚಿವ ಜಿ.ಪರಮೇಶ್ವರ್ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಜಿಪಿ ರಾಮಚಂದ್ರರಾವ್, ”ಈ ಬಗ್ಗೆ ನಮ್ಮ ವಕೀಲರೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಇದು ನಮಗೂ ಶಾಕಿಂಗ್ ಆಗಿದೆ. ಇದೆಲ್ಲಾ ಫ್ಯಾಬ್ರಿಕೇಟೆಡ್ (ಸೃಷ್ಟಿಸಲ್ಪಟ್ಟಿದ್ದು), ವಿಡಿಯೋ ಎಲ್ಲವೂ ಸುಳ್ಳು” ಎಂದು ಹೇಳಿದ್ದಾರೆ.
”ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲವೂ ಸುಳ್ಳು. ತನಿಖೆಯಾಗಬೇಕು” ಎಂದು ಡಿಜಿಪಿ ಪ್ರತಿಕ್ರಿಯೆ ನೀಡಿದ್ದಾರೆ.
ನಿಮಗೆ ಇದರ ಬಗ್ಗೆ ಏನಾದರೂ ಸುಳಿವು ಇತ್ತಾ? ಎಂಬ ಪ್ರಶ್ನೆಗೆ, ”ಇದರ ಬಗ್ಗೆ ನನಗೇನು ಐಡಿಯಾ ಇಲ್ಲ” ಎಂದ ಅವರು, ”ಯಾವಾಗ ಆಗಿರೋದು ಎಂದು ಗೊತ್ತಿಲ್ಲ. ಆಗಿದ್ದರೆ ಅಲ್ವಾ ಗೊತ್ತಾಗಲಿಕ್ಕೆ” ಎಂದಿದ್ದಾರೆ.
ಇದೇ ವೇಳೆ, ”ಗೃಹ ಸಚಿವರನ್ನು ಭೇಟಿಯಾಗಿ ಈ ತರಹದ ಸುಳ್ಳು ಮಾಹಿತಿ ಹಬ್ಬಿಸ್ತಾ ಇದ್ದಾರೆ, ಅದರ ಬಗ್ಗೆ ಅವರ ಹತ್ತಿರ ಮಾತನಾಡಲು ಬಂದೆ ಅಷ್ಟೇ” ಎಂದು ಡಿಜಿಪಿ ರಾಮಚಂದ್ರರಾವ್ ಹೇಳಿದ್ದಾರೆ.
ಇದಕ್ಕೂ ಮುನ್ನ, ಶೇಷಾದ್ರಿ ರಸ್ತೆಯಲ್ಲಿ ಡಿಸಿಆರ್ಇ ಕಚೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ರಾಮಚಂದ್ರರಾವ್, ”ನನ್ನ ವಿರುದ್ಧ ಯಾರೋ ಅಪರಿಚಿತರು ಷಡ್ಯಂತ್ರ ಮಾಡಿದ್ದಾರೆ. ವೈರಲ್ ಆಗುತ್ತಿರುವುದು ಎಐ ವಿಡಿಯೋ ಆಗಿದೆ” ಎಂದಷ್ಟೇ ಹೇಳಿ ನಿರ್ಗಮಿಸಿದ್ದರು.
ರಾಮಚಂದ್ರರಾವ್ ಹಾಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬರುವ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲಿನಲ್ಲಿರುವ ನಟಿ ರನ್ಯಾರಾವ್ ಮಲತಂದೆಯಾಗಿರುವ ಅವರನ್ನು, ಆ ಪ್ರಕರಣದ ಸಂಬಂಧ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.
ಇದನ್ನೂ ಓದಿ : ಕಚೇರಿಯಲ್ಲೇ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ | ವರದಿ ನೀಡುವಂತೆ ಗೃಹ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ


















