ಬೆಂಗಳೂರು: ಒಡಿಶಾದ ರ್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಟ್ವಿಸ್ಟ್ ಒಂದು ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಹಲವು ವಿಚಾರಗಳು ಬಯಲಿಗೆ ಬಂದಿವೆ. ಟೆಕ್ಕಿ ಅತುಲ್ ಸುಭಾಷ್ ಗೆ ಆಗಿದ್ದ ಪರಿಸ್ಥಿತಿ ಅಭಿನವ್ ಗೂ ಆಗಿದೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ರ್ಯಾಪರ್ ಹಾಗೂ ಪತ್ನಿಯ ಮಧ್ಯೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಈ ಮಧ್ಯೆ ಪತ್ನಿ ಅಭಿನವ್ ಸಿಂಗ್ ವಿರುದ್ಧ ಎರಡು ಕೇಸ್ ಗಳನ್ನು ಕೂಡ ದಾಖಲಿಸಿದ್ದರು ಎನ್ನಲಾಗಿದೆ. ಒಡಿಶಾದಲ್ಲಿ ಎರಡು ಕೇಸ್ ದಾಖಲಿಸಿದ್ದರು. ಹೀಗಾಗಿ ಅಭಿನವ್ ಹಲವಾರು ಬಾರಿ ವಿಚಾರಣೆಗೆ ಹಾಜರಾಗಿ ಬಂದಿದ್ದರು.
ಅಲ್ಲದೇ, ಅಭಿನವ್ ಆತ್ಮಹತ್ಯೆಗೂ ಎರಡು ದಿನ ಮೊದಲು ಪತ್ನಿ, ರಾಷ್ಟ್ರೀಯಾ ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು ಎನ್ನಲಾಗಿದೆ. ಈ ಕೇಸ್ ಗಳ ಜಂಜಾಟ ಬೇಡ ಎಂದು ಅತ್ಮಹತ್ಯಗೆ ತೀರ್ಮಾನ ಕೈಗೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕೇಸ್ ಗಳಿಂದಾಗಿ ರೋಸಿ ಹೋಗಿ ಅಮೆಜಾನ್ ನಲ್ಲಿ ಅಭಿನವ್ ವಿಷ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ, ಎರಡು ದಿನಗಳಿಂದ ಮನೆಯಲ್ಲಿ ವಿಷ ಇಟ್ಟು ಕಾಯುತ್ತಿದ್ದರು. ಸಾಯುವ ದಿನ ಮನೆಯಲ್ಲಿ ಗೆಳೆಯನ ಜೊತೆಗೆ ಭಾರತ – ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಿದ್ದರು. ಗೆಳೆಯ ವಾಪಸ್ಸು ಹೋದ ಮೇಲೆ ಮನೆಯಲ್ಲಿ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ಮಾರತ್ ಹಳ್ಳಿ ಪೊಲೀಸರು ಕೈಗೊಂಡಿದ್ದಾರೆ.