ಜೋಧ್ಪುರ್: ಮಾಜಿ ಮುಂಬೈ ಇಂಡಿಯನ್ಸ್ ಆಟಗಾರ ಶಿವಾಲಿಕ್ ಶರ್ಮಾ ವಿರುದ್ಧ ರಾಜಸ್ಥಾನದ ಜೋಧ್ಪುರ್ನಲ್ಲಿ ಅತ್ಯಾಚಾರ ಮತ್ತು ಮೋಸದ ಆರೋಪದಡಿ ಪ್ರಕರಣ ದಾಖಲಾಗಿದೆ. ಕುಡಿ ಭಗತಾಸುನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಜೋಧ್ಪುರ್ನ ಕುಡಿ ಭಗತಾಸುನಿ ಪ್ರದೇಶದ ಸೆಕ್ಟರ್ 2ರಲ್ಲಿ ವಾಸಿಸುವ ಯುವತಿಯೊಬ್ಬರು ಶಿವಾಲಿಕ್ ಶರ್ಮಾ ವಿರುದ್ಧ ದೂರು ಸಲ್ಲಿಸಿದ್ದಾರೆ. ಸಂತ್ರಸ್ತೆಯ ಪ್ರಕಾರ, 2023ರ ಫೆಬ್ರವರಿಯಲ್ಲಿ ತಾನು ಗುಜರಾತ್ನ ಬರೋಡಾಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಶಿವಾಲಿಕ್ ಶರ್ಮಾರನ್ನು ಭೇಟಿಯಾಗಿದ್ದಳು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಆರಂಭವಾಗಿ, ಕ್ರಮೇಣ ಸಂಬಂಧ ಗಾಢವಾಯಿತು.
ಆ ನಂತರ ಇಬ್ಬರೂ ದೂರವಾಣಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಸಂತ್ರಸ್ತೆಯ ಪ್ರಕಾರ, ಶಿವಾಲಿಕ್ ತನ್ನೊಂದಿಗೆ ಹತ್ತರವಾಗಿದ್ದ ಎಂದು ಹೇಳಿದ್ದು, ವಿವಾಹದ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಜೊತೆಗೆ, ಜೋಧ್ಪುರ್ಗೆ ಮರಳಿದಾಗಲೂ ಇಬ್ಬರ ನಡುವೆ ದೈಹಿಕ ಸಂಬಂಧ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಇಬ್ಬರು ರಾಜಸ್ಥಾನದ ಜೈಪುರ್ ಸೇರಿದಂತೆ ಹಲವು ಸ್ಥಳಗಳಿಗೆ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದರು.
2024ರ ಆಗಸ್ಟ್ನಲ್ಲಿ ಸಂತ್ರಸ್ತೆಯನ್ನು ಬರೋಡಾಕ್ಕೆ ಕರೆಸಿಕೊಂಡ ಶಿವಾಲಿಕ್ನ ಪೋಷಕರು, “ಅವನು ಕ್ರಿಕೆಟರ್ ಆಗಿದ್ದಾನೆ, ಬೇರೆಡೆಯಿಂದಲೂ ಪ್ರಪೋಸಲ್ಗಳು ಬರುತ್ತಿವೆ. ಈ ಸಂಬಂಧ ಮುಂದುವರಿಯಲು ಸಾಧ್ಯವಿಲ್ಲ,” ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೋಸದ ಬಗ್ಗೆ ತಿಳಿದ ಯುವತಿ, ಜೋಧ್ಪುರ್ನ ಕುಡಿ ಭಗತಾಸುನಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಶಿವಾಲಿಕ್ ಶರ್ಮಾ ಯಾರು?
ಶಿವಾಲಿಕ್ ಶರ್ಮಾ ಗುಜರಾತ್ನ ಬರೋಡಾದ ನಿವಾಸಿಯಾಗಿದ್ದು, ಒಮ್ಮೆ ಭಾರತೀಯ ಕ್ರಿಕೆಟ್ನ ಭವಿಷ್ಯದ ಆಟಗಾರ ಎಂದು ಪರಿಗಣಿಸಲಾಗಿತ್ತು. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ 2024ರಲ್ಲಿ ಆಡಿದ್ದರು. ಬರೋಡಾ ತಂಡದಲ್ಲಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಅವರಿಗೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಸಿಕ್ಕಿತ್ತು.