ಬೆಂಗಳೂರು: ಅತ್ಯಾಚಾರ ಆರೋಪಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna)ಗೆ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ (Judicial custody) ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಶನಿವಾರ ಪ್ರಜ್ವಲ್ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದರು. ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು.
ಜೈಲು ಅಧಿಕಾರಿಗಳು ಅವಕಾಶ ನೀಡಿದ್ದಲ್ಲಿ ಅರ್ಜಿ ವಿಚಾರಣೆ ನಡೆಸುತ್ತೇವೆ. ಸೋಮವಾರ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣ, ಕೆ.ಆರ್.ನಗರದ ಕಿಡ್ನ್ಯಾಪ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಪ್ರಜ್ವಲ್ ನ್ನನ್ನು ಎಸ್ ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ ಇಂದು 42ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ ಪ್ರಜ್ವಲ್ ಪರಪ್ಪನ ಅಗ್ರಹಾರ ಸೇರಿದರು.
ಈಗಾಗಲೇ ಮೂರು ಕೇಸ್‌ಗಳನ್ನ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ 4ನೇ ಕೇಸ್ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳದ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ ಎಂದು ದೂರಿದ್ದಾರೆ.