ಬೆಂಗಳೂರು : ನಟಿ ರನ್ಯಾ ರಾವ್ ಈಗಾಗಲೇ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ.
ಈಗಾಗಲೇ ಪ್ರಕರಣದ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ ಬೆಂಗಳೂರಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಭಯಾನಕ ಅಂಶಗಳು ಹೊರ ಬಿದ್ದಿವೆ. ನಟಿ ರನ್ಯಾ ಒಂದೇ ವರ್ಷದಲ್ಲಿ ಬರೋಬ್ಬರಿ 102 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ದೇಶಕ್ಕೆ ಸಾಗಾಟ ಮಾಡಿದ್ದರು ಎಂಬ ಅಂಶ ಉಲ್ಲೇಖವಾಗಿದೆ.
ನಟಿ ರನ್ಯಾ ರಾವ್ ಮತ್ತು ಆಕೆಯ ಸಹಚರ ತರುಣ್ ಕೊಂಡೂರು ಆಫ್ರಿಕಾದಿಂದ ನೇರವಾಗಿ ಚಿನ್ನ ತರಲು ಮೊದಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ದುಬೈ ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಚಿನ್ನ ಆಫ್ರಿಕಾದ ಗಣಿಗಳಿಂದ ಬರುತ್ತದೆ ಎಂದು ತಿಳಿದ ಆರೋಪಿಗಳು, ದುಬೈನಲ್ಲಿ ‘ವೀರ ಡೈಮಂಡ್ಸ್ ಟ್ರೇಡಿಂಗ್’ ಎಂಬ ಕಂಪನಿ ತೆರೆದಿದ್ದಾರೆ. ಆನಂತರ ಉಗಾಂಡಾ, ಕೀನ್ಯಾ, ಟಾಂಜಾನಿಯಾದಲ್ಲಿ ಚಿನ್ನದ ಮೂಲ ಹುಡುಕಲು ಯತ್ನಿಸಿದ್ದಾರೆ.
ಆದರೆ, ಈ ವ್ಯವಹಾರದಲ್ಲಿ ನಟಿ ರನ್ಯಾ ಹಲವು ಪೆಟ್ಟುಗಳನ್ನೂ ತಿಂದಿದ್ದಾರೆ. ಉಗಾಂಡಾದ ‘ಬೆನ್’ ಎಂಬ ಏಜೆಂಟ್ ಗೆ 5 ಕೆಜಿ ಚಿನ್ನಕ್ಕಾಗಿ ಮುಂಗಡ 23.5 ಲಕ್ಷ ರೂ. ನೀಡಿದ್ದರು. ನಂತರ ತೆರಿಗೆ ಹೆಸರಲ್ಲಿ ಮತ್ತೆ ಲಕ್ಷಾಂತರ ರೂಪಾಯಿ ಪಾವತಿಸಿದ್ದರು. ಆದರೆ ಅಂತಿಮವಾಗಿ ಆ ಏಜೆಂಟ್ ಚಿನ್ನವನ್ನೂ ನೀಡದೆ ಹಣವನ್ನೂ ವಾಪಸ್ ಕೊಡದೆ 2 ಕೋಟಿ ಗೂ ಅಧಿಕ ಹಣ ವಂಚಿಸಿದ್ದ ಎನ್ನುವುದಾಗಿ ತಿಳಿದು ಬಂದಿದೆ.
ಆಫ್ರಿಕಾದಲ್ಲಿ ಚಿನ್ನ ಖರೀದಿಸಲು ರನ್ಯಾ ರಾವ್ ಹಣ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಖರೀದಿಸಿದ್ದ ಚಿನ್ನವನ್ನು ಸ್ವಿಜರ್ಲೆಂಡ್ ಅಥವಾ ಥೈಲ್ಯಾಂಡ್‌ಗೆ ರಫ್ತು ಮಾಡುತ್ತಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ತಮ್ಮ ಮೈಮೇಲೆ ಅಡಗಿಸಿಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದರು. ಮಾರ್ಚ್ 2024 ರಿಂದ ಮಾರ್ಚ್ 2025 ರ ಮಧ್ಯೆ ಹೀಗೆ 15 ಬಾರಿ ಪ್ರಯಾಣ ಮಾಡಿ ಬರೋಬ್ಬರಿ 127.87 ಕೆಜಿ ಚಿನ್ನ ತಂದಿದ್ದರು ಎನ್ನಲಾಗಿದೆ.
ರನ್ಯಾ ಹಿರಿಯ ಪೊಲೀಸ್ ಅಧಿಕಾರಿ ಮಗಳಾಗಿದ್ದರಿಂದಾಗಿ ವಿಮಾನ ನಿಲ್ದಾಣದಲ್ಲಿ ಅವರಿಗೆ ‘ವಿಐಪಿ ಪ್ರೋಟೋಕಾಲ್’ ಸಿಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ರನ್ಯಾ ಕಸ್ಟಮ್ಸ್ ತಪಾಸಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಖಚಿತ ಮಾಹಿತಿ ಹಿನ್ನೆಲೆಯಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿ, 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಇಡಿ, 34 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ದಂಧೆಗೆ ಸಂಬಂಧಿಸಿದಂತೆ ತರುಣ್ ಕೊಂಡೂರು, ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಹೆಸರು ಉಲ್ಲೇಖವಾಗಿದೆ.



















