ಬೆಂಗಳೂರು : ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಹಿಂದೆ ನಾಯಕರು, ಸ್ವಾಮೀಜಿಗಳು ಇರುವ ಶಂಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕನ್ನಡ ಚಲನಚಿತ್ರ, ಕಿರುತೆರೆಯ ಕೆಲ ನಟಿಯರನ್ನು ಬಳಸಿಕೊಂಡು ವಿದೇಶದಿಂದ ಕಳ್ಳ ಹಾದಿಯಲ್ಲಿ ಚಿನ್ನ ಸಾಗಿಸುವ ಜಾಲವೊಂದು ಸಕ್ರಿಯವಾಗಿರುವ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ‘ದುಬೈ ಪ್ರವಾಸ’ಕ್ಕೆ ಹೋಗಿದ್ದ ನಟಿಯರ ಪಟ್ಟಿಯನ್ನು ಡಿಆರ್ ಐ ತಯಾರಿಸಿದ್ದು, ಆ ನಟಿಯರ ಆರ್ಥಿಕ ವ್ಯವಹಾರದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಹೀಗಾಗಿ ಇನ್ನೂ ಹಲವರಿಗೆ ಟೆನ್ಶನ್ ಶುರುವಾಗಿದೆ.
ಖ್ಯಾತನಾಮರ ಬದಲು ಎರಡನೇ ಹಂತದ ನಟಿಯರನ್ನೇ ಚಿನ್ನ ಕಳ್ಳ ಸಾಗಣೆದಾರರು ಗುರಿಯಾಗಿಸಿ ಬಳಸಿದ್ದಾರೆ. ಈ ನಟಿಯರಿಗೆ ಹಣದಾಸೆ ಅಥವಾ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷವೊಡ್ಡಿ ಈ ಕೃತ್ಯ ಎಸಗಿದ್ದಾರೆಂಬ ಸಂಶಯ ವ್ಯಕ್ತವಾಗಿದೆ.
ಐದು ವರ್ಷಗಳಲ್ಲಿ ದುಬೈಗೆ ನಟ-ನಟಿಯರು ಹೆಚ್ಚಿನ ಪ್ರಯಾಣ ಮಾಡಿದ್ದಾರೆ. ಕೆಲವು ನಟ-ನಟಿಯರು ಪದೇ ಪದೆ ದುಬೈಗೆ ಭೇಟಿ ನೀಡಿರುವುದು ಅನುಮಾನ ಮೂಡಿಸಿದೆ ಎಂದು ಉನ್ನತ ಮೂಲಗಳ ಮಾಹಿತಿಯಾಗಿದೆ.