ಪಣಜಿ: ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ದೃಶ್ಯವೊಂದನ್ನು ಅನುಕರಿಸಿ ವಿವಾದಕ್ಕೆ ಸಿಲುಕಿದ್ದಾರೆ. ತುಳುನಾಡಿನ ದೈವಾರಾಧನೆಯ ಬಗ್ಗೆ ಅವಹೇಳನಕಾರಿಯಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ವೇದಿಕೆಯ ಮೇಲಿದ್ದ ರಣವೀರ್ ಸಿಂಗ್, ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ಕಾಂತಾರ ಚಾಪ್ಟರ್ 1’ರ ದೃಶ್ಯವನ್ನು ನೆನಪಿಸಿಕೊಂಡ ರಣವೀರ್, ಗುಳಿಗ ದೈವದ ಸಹೋದರಿ ಚೌಂಡಿಯನ್ನು “Female Ghost” (ಹೆಣ್ಣು ದೆವ್ವ) ಎಂದು ಸಂಭೋದಿಸಿದರು. ಅಷ್ಟೇ ಅಲ್ಲದೆ, ಕಣ್ಣುಗಳನ್ನು ತಿರುಗಿಸಿ, ನಾಲಿಗೆ ಹೊರಹಾಕಿ ವಿಚಿತ್ರವಾಗಿ ಕಿರುಚುವ ಮೂಲಕ ದೈವದ ಪಾತ್ರವನ್ನು ಅಣಕಿಸಿದರು. ಇದನ್ನು ನೋಡಿದ ರಿಷಬ್ ಶೆಟ್ಟಿ ಅವರು ನಗುತ್ತಲೇ ಪ್ರತಿಕ್ರಿಯಿಸಿದರು.
ರಣವೀರ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದೈವವನ್ನು ದೆವ್ವ ಎಂದು ಕರೆದಿರುವುದು ಮತ್ತು ವೇದಿಕೆಯ ಮೇಲೆ ಅಣಕು ಪ್ರದರ್ಶನ ಮಾಡಿರುವುದು ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ನೆಟ್ಟಿಗರ ಆಕ್ರೋಶ:
“ದೈವ ಮತ್ತು ದೆವ್ವದ ನಡುವಿನ ವ್ಯತ್ಯಾಸ ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಪವಿತ್ರ ದೈವಾರಾಧನೆಯನ್ನು ಹೀಗೆ ಅವಹೇಳನ ಮಾಡುವುದು ಸರಿಯಲ್ಲ,” ಎಂದು ಕೆಲವರು ಕಮೆಂಟ್ ಮಾಡಿದ್ದರೆ, “ರಣವೀರ್ ಸಿಂಗ್ ಪ್ರಚಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಪವಿತ್ರ ನಂಬಿಕೆಗಳಿಗೆ ಬೆಲೆ ಕೊಡುವುದಿಲ್ಲ,” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಅವರು ಇದನ್ನು ತಡೆಯುವ ಬದಲು ನಗುತ್ತಾ ಕುಳಿತಿದ್ದಕ್ಕೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ರಣವೀರ್ ಅವರು ತಮಾಷೆಯಾಗಿ, “ನಾನು ‘ಕಾಂತಾರ 3’ರಲ್ಲಿ ನಟಿಸಬೇಕೆಂದು ಯಾರಾದರೂ ಬಯಸುತ್ತೀರಾ? ಹಾಗಿದ್ದರೆ ಇವರಿಗೆ (ರಿಷಬ್ ಶೆಟ್ಟಿ) ಹೇಳಿ,” ಎಂದೂ ಹೇಳಿಕೆ ನೀಡಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಅಥವಾ ರಿಷಬ್ ಶೆಟ್ಟಿ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ : ‘ರಾಜಕೀಯವೇ ಆರ್ಥಿಕತೆಯನ್ನು ಮೀರಿಸುತ್ತಿದೆ’: ಅಮೆರಿಕಕ್ಕೆ ಜೈಶಂಕರ್ ಪರೋಕ್ಷ ಟಾಂಗ್!



















