ನವದೆಹಲಿ: ವ್ಯಕ್ತಿಯೊಬ್ಬನ ಒಳ್ಳೆಯ ಗುಣಗಳನ್ನೋ, ನಡತೆಯನ್ನೋ ಮೆಚ್ಚಿ ಯಾವುದೇ ಹೆಣ್ಣುಮಗಳು ಪ್ರೀತಿಯನ್ನು ಒಪ್ಪಿರುತ್ತಾಳೆ. ಆದರೆ, ಪ್ರೀತಿಸಿದ ಹುಡುಗನ ಗುಣಗಳು ಸರಿಯಿಲ್ಲ, ಆತನ ವಿಚಾರಗಳು ಸಮಾಜಕ್ಕೆ ಮಾರಕವಾಗಿವೆ ಎಂದಾಗ ಯಾವುದೇ ಹುಡುಗಿಯು ಪ್ರೀತಿಯನ್ನು ಮುಂದುವರಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ರಣವೀರ್ ಅಲಹಾಬಾದಿಯಾ (Ranveer Allahbadia) “ಲೈಂಗಿಕತೆ’’ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆತನ ಗೆಳತಿಯು ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಖ್ಯಾತ ಯುಟ್ಯೂಬರ್ ರಣವೀರ್ ಅಲಹಾಬಾದಿಯಾ ಹಾಗೂ ನಿಕ್ಕಿ ಶರ್ಮಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ರಣವೀರ್ ಅಲಹಾಬಾದಿಯಾ ಅವರ ಹೇಳಿಕೆಯಿಂದ ಬೇಸತ್ತು ಅವರು ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ, ನಿಕ್ಕಿ ಶರ್ಮಾ ಅವರು ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಚರ್ಚೆಗೂ ಕಾರಣವಾಗಿದೆ. “ಸರಿಯಾದ ವ್ಯಕ್ತಿಗಳು ಮಾತ್ರ ನಿಮ್ಮಲ್ಲಿ ಪುಳಕ ಸೃಷ್ಟಿಸುತ್ತಾರೆ” ಎಂದು ಅವರು ಪೋಸ್ಟ್ ಮಾಡಿರುವುದು ಬ್ರೇಕಪ್ ವದಂತಿಗೆ ರೆಕ್ಕೆ ಪುಕ್ಕ ನೀಡಿದಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ನಿಕ್ಕಿ ಶರ್ಮಾ ತೀರ್ಮಾದ ಪರವಾಗಿ ಚರ್ಚೆಗಳು ನಡೆಯುತ್ತಿವೆ.
ಇಂಡಿಯಾಸ್ ಗಾಟ್ ಲೇಟೆಂಟ್ ಶೋನಲ್ಲಿ ಭಾಗವಹಿಸಿದ್ದ ರಣವೀರ್ ಅಲಹಾಬಾದಿಯಾ ಅವರು, ಸ್ಪರ್ಧಿಯೊಬ್ಬರಿಗೆ ಅಸಭ್ಯವಾದ ಪ್ರಶ್ನೆ ಕೇಳಿದ್ದರು. ತಂದೆ-ತಾಯಿಯ ವಿಷಯವನ್ನು ಪ್ರಸ್ತಾಪಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ರಣವೀರ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ರಣವೀರ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೈಬರ್ ಇಲಾಖೆಯು ಸಮನ್ಸ್ ಕೂಡ ಜಾರಿ ಮಾಡಿದೆ.