ಮುಂಬೈ: ಭಾರತದ ಪ್ರತಿಭಾನ್ವಿತ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ (Prithvi Shaw) 2025-26ರ ದೇಶಿ ಕ್ರಿಕೆಟ್ ಸೀಸನ್‌ಗಾಗಿ ತಮ್ಮ ತವರು ತಂಡ ಮುಂಬೈ ಅನ್ನು ತೊರೆದು ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ರಾಷ್ಟ್ರೀಯ ತಂಡದಿಂದ 2021ರಿಂದ ಹೊರಗುಳಿದಿರುವ ಶಾ, ತಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಪೃಥ್ವಿ ಶಾ ಹೇಳಿದ್ದೇನು?
2016ರಿಂದ ಮುಂಬೈ ತಂಡದಲ್ಲಿ ಆಡುತ್ತಿದ್ದ ಪೃಥ್ವಿ ಶಾ, ಸುಮಾರು ಎಂಟು ವರ್ಷಗಳ ಬಳಿಕ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರಪೇಕ್ಷಣಾ ಪತ್ರ (NOC) ಕೋರಿ ಅರ್ಜಿ ಸಲ್ಲಿಸಿದ್ದರು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಇದಕ್ಕೆ ಒಪ್ಪಿಗೆ ನೀಡಿದ ನಂತರ, ಶಾ ಇದೀಗ ಮಹಾರಾಷ್ಟ್ರ ತಂಡದೊಂದಿಗೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ ಪೃಥ್ವಿ ಶಾ, “ನನ್ನ ವೃತ್ತಿಜೀವನದ ಈ ಹಂತದಲ್ಲಿ ಕ್ರಿಕೆಟಿಗನಾಗಿ ಬೆಳೆಯಲು ಮಹಾರಾಷ್ಟ್ರ ತಂಡ ನನಗೆ ನೆರವು ನೀಡುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹಲವು ವರ್ಷಗಳಲ್ಲಿ ನನಗೆ ದೊರೆತ ಅವಕಾಶಗಳು ಮತ್ತು ಬೆಂಬಲಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪ್ರಗತಿಪರ ದೃಷ್ಟಿಕೋನ ಶ್ಲಾಘಿಸಿದ ಶಾ!
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನ ದೂರದೃಷ್ಟಿಯ ಯೋಜನೆಗಳನ್ನು ಪೃಥ್ವಿ ಶಾ ಶ್ಲಾಘಿಸಿದ್ದಾರೆ. “ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ರಾಜ್ಯದಾದ್ಯಂತ ಕ್ರಿಕೆಟ್ ಮೂಲಸೌಕರ್ಯವನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL), ಮಹಿಳಾ ಎಂಪಿಎಲ್, ಕಾರ್ಪೊರೇಟ್ ಶೀಲ್ಡ್ ಮತ್ತು ಡಿ.ಬಿ. ದೇವಧರ್ ಟೂರ್ನಿಯಂತಹ ಉಪಕ್ರಮಗಳು ಅವರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ” ಎಂದು ಶಾ ಹೇಳಿದ್ದಾರೆ.
“ಇಂತಹ ಪ್ರಗತಿಪರ ತಂಡದ ಭಾಗವಾಗುವುದು ಕ್ರಿಕೆಟಿಗನಾಗಿ ನನ್ನ ಪ್ರಯಾಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನನಗೆ ವಿಶ್ವಾಸವಿದೆ. ಮಹಾರಾಷ್ಟ್ರ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ಅಂಕಿತ್ ಬಾವ್ನೆ, ರಾಹುಲ್ ತ್ರಿಪಾಠಿ, ರಜನೀಶ್ ಗುರ್ಬಾನಿ ಮತ್ತು ಮುಖೇಶ್ ಚೌಧರಿ ಅವರಂತಹ ಪ್ರತಿಭಾನ್ವಿತ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪೃಥ್ವಿ ಶಾ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಶಾ ಸೇರ್ಪಡೆಯನ್ನು ಸ್ವಾಗತಿಸಿದ ಎಂಸಿಎ ಅಧ್ಯಕ್ಷ ರೋಹಿತ್ ಪವಾರ್!
ಪೃಥ್ವಿ ಶಾ ಅವರ ಸೇರ್ಪಡೆಯ ಕುರಿತು ಮಾತನಾಡಿದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‍ನ ಅಧ್ಯಕ್ಷ ರೋಹಿತ್ ಪವಾರ್, “ಪೃಥ್ವಿ ಶಾ ಅವರ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಅನುಭವದಿಂದ ಇತರ ಆಟಗಾರರು, ವಿಶೇಷವಾಗಿ ಯುವಕರು ಪ್ರೇರಣೆ ಪಡೆಯಲಿದ್ದಾರೆ. ಈಗಾಗಲೇ ನಮ್ಮ ತಂಡದಲ್ಲಿ ಹಲವು ಅನುಭವಿ ಆಟಗಾರರಿದ್ದು, ಪೃಥ್ವಿ ಶಾ ತಂಡ ಸೇರಿಕೊಂಡಿರುವುದು ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪೃಥ್ವಿ ಶಾ ದೇಶಿ ಕ್ರಿಕೆಟ್ ಅಂಕಿಅಂಶಗಳು ಮತ್ತು ಭವಿಷ್ಯ!
ಪ್ರಥ್ವಿ ಶಾ ಮುಂಬೈ ಪರ 58 ಪಂದ್ಯಗಳಲ್ಲಿ 4,556 ರನ್ ಗಳಿಸಿದ್ದು, 46.02ರ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. ಆದಾಗ್ಯೂ, ಕಳೆದ ರಣಜಿ ಟ್ರೋಫಿಯ ಎರಡನೇ ಹಂತದಲ್ಲಿ ಅವರಿಗೆ ತಂಡದಿಂದ ಹೊರಗುಳಿಯಬೇಕಾಯಿತು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ್ದರೂ, ವಿಜಯ್ ಹಝಾರೆ ಏಕದಿನ ಟೂರ್ನಿಗೆ ಅವರು ಆಯ್ಕೆಯಾಗಲಿಲ್ಲ. ಇದರ ನಡುವೆ, ಮುಂಬೈ ತಂಡದಿಂದ ಯಶಸ್ವಿ ಜೈಸ್ವಾಲ್ ಕೂಡ ಗೋವಾ ತಂಡಕ್ಕೆ ಹೋಗುವ ಕುರಿತು ಎನ್‌ಒಸಿ ಕೇಳಿದ್ದರೂ, ಬಳಿಕ ತಮ್ಮ ತೀರ್ಮಾನ ಬದಲಾಯಿಸಿ ಮುಂಬೈ ಜೊತೆಗೇ ಮುಂದುವರಿದಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ಸಹ ಪ್ರಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ತಂಡ ಮುಂದಾಗಲಿಲ್ಲ.
ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ತಂಡದಲ್ಲಿ ಹೊಸ ಅವಕಾಶ ಪಡೆದಿರುವ ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ ಮೊದಲಾದ ಆಟಗಾರರ ಜೊತೆ ಬ್ಯಾಟ್ ಬೀಸಲಿದ್ದಾರೆ.