ಬೆಂಗಳೂರು : ನಟಿ ರಮ್ಯಾ ಅವರಿಗೆ ಡಿಬಾಸ್ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ದೂರು ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾಗೆ ಕಳುಹಿಸಿರುವ ಅವಹೇಳನಕಾರಿ ಸಂದೇಶಗಳನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಇಂತಹ ಸಂದೇಶದಿಂದ ಮಹಿಳೆಯರ ಸ್ಥಾನಮಾನಕ್ಕೆ ತೊಂದರೆ ಯಾಗುತ್ತಿದೆ. ಪ್ರಕರಣವನ್ನು ಸರಿಯಾಗಿ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ದೂರು ದಾಖಲಿಸಲಾಗಿದೆ.
ದೂರಿನಲ್ಲೇನಿದೆ ?
ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸೌಮ್ಯ ರೆಡ್ಡಿ ವಿನಂತಿಸಿಕೊಂಡಿದ್ದಾರೆ.