ಬೆಂಗಳೂರು: ಒಂದು ಕಾಲದ ಕುಚುಕು ಸ್ನೇಹಿತರು, ಅಭಿಷಿಕ್ತ ದೊರೆಗಳು, ರಿಪಬ್ಲಿಕ್ ಆಫ್ ಬಳ್ಳಾರಿಯ ನಾಯಕರು ಈಗ ವಿರೋಧಿಗಳಾಗಿದ್ದಾರೆ. ಶ್ರೀರಾಮುಲು (Sriramulu) ವಿಚಾರದಲ್ಲಿ ನಾನು ಚಾಡಿ ಹೇಳಿಲ್ಲ. ಅವರನ್ನು ಬೆಳೆಸಿದ್ದೇ ನಾನು. ಹೀಗಾಗಿ ಅವರ ಬಗ್ಗೆ ಚಾಡಿ ಹೇಳುವ ಅವಶ್ಯಕತೆ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರು ಹನುಮಂತುಗೆ (Bangaru Hanumanthu) ಸಂಡೂರು ಉಪಚುನಾವಣೆಯ ಟಿಕೆಟ್ ನಾನು ಕೊಡಿಸಲಿಲ್ಲ. ಪಕ್ಷ ಹನುಮಂತುಗೆ ಟಿಕೆಟ್ ನೀಡಿತ್ತು. ಲೋಕಸಭೆ ಚುನಾವಣೆ ನಡೆಯುವ ತಿಂಗಳ ಮೊದಲು ಬಿಜೆಪಿಗೆ ನಾನು ಸೇರಿದೆ. ಬಳ್ಳಾರಿಗೆ ಹೋಗಲು ನನಗೆ ಅನುಮತಿ ಇರಲಿಲ್ಲ. ಸುಪ್ರೀಂ ಕೋರ್ಟ್ ಅನಮತಿ ನೀಡಿದ ಬಳಿಕ ನಾನು ಬಳ್ಳಾರಿಗೆ ಹೋಗಿದ್ದೆ. ಸಂಡೂರು ಕ್ಷೇತ್ರದ ಟಿಕೆಟ್ ಚರ್ಚೆಯ ವೇಳೆ ಯಾರಿಗೂ ನೀಡಿದರೂ ನಾನು ದುಡಿಯುತ್ತೇನೆ ಎಂದಿದ್ದೆ ಎದಿದ್ದಾರೆ.
1991 ರಲ್ಲಿ ರಾಮುಲು ಸೋದರ ಮಾವನ ಕೊಲೆ ನಡೆದಿತ್ತು. ಆ ಕೊಲೆಯ ನಂತರ ನನ್ನಆಶ್ರಯಕ್ಕೆ ರಾಮುಲು ಬಂದಿದ್ದರು. ಚಾಕು ಹಿಡಿದು, ಬೆನ್ನಿಗೆ ಕೊಡಲಿ ಕಟ್ಟಿಕೊಂಡವರ ರಕ್ಷಣೆಯಲ್ಲಿ ರಾಮುಲು ಬಂದಿದ್ದರು. ಆಗ ಅವರಿಗೆ ರಕ್ಷಣೆ ಬೇಕಿತ್ತು. ಮಾವನನ್ನು ಮುಗಿಸಿದವರು ರಾಮುಲು ಹತ್ಯೆಗೆ ಬೆದರಿಕೆ ಹಾಕಿದ್ದರು. ರಾಮುಲು ಬಗ್ಗೆ ನಮ್ಮ ತಾಯಿಗೆ ನಂಬಿಕೆ ಇತ್ತು. ಅವನನ್ನು ಕಾಪಾಡುವ ಜವಾಬ್ದಾರಿ ನಿನ್ನದು ಅಂತ ನಮ್ಮ ತಾಯಿ ಹೇಳಿದ್ದರು. ಹೀಗಾಗಿ ಅವರನ್ನು ಕಾಪಾಡಿಕೊಂಡು ಬಂದಿದ್ದೆ ಎಂದಿದ್ದಾರೆ.
ರಾಮುಲು ಮಾವನ ಕೊಲೆಗೆ ಸೂರ್ಯನಾರಾಯಣ ರೆಡ್ಡಿ ಫಂಡಿಂಗ್ ಮಾಡಿದ್ದರು. ದಿವಾಕರ್ ಬಾಬು ಮೂಲಕ ಸೂರ್ಯನಾರಾಯಣ ರೆಡ್ಡಿ ಕೊಲೆ ಮಾಡಿಸಿದರು. ಈಗ ಅವರು ಕಾಂಗ್ರೆಸ್‌ನಲ್ಲಿದ್ದಾರೆ. ರಾಮುಲು ತಮ್ಮ ಮಾವನ ಕೊಲೆಗಾರರ ಮೇಲೆ ಸೇಡಿಗೆ ಮುಂದಾಗಿದ್ದರು. ಆಗ ನಾನು ರಾಮುಲುಗೆ ಬುದ್ಧಿವಾದ ಹೇಳಿ, ಅಪರಾಧದಲ್ಲಿ ಶಾಮೀಲಾದರೆ ಬೆಳೆಯಲು ಸಾಧ್ಯವಿಲ್ಲ. ಮುಂದೆ ದೊಡ್ಡದಾಗಿ ಬೆಳಿ ಎಂದು ಹೇಳಿ ಬೆಳೆಸಿದೆ ಎಂದಿದ್ದಾರೆ. 1999 ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿ ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ ಎಂದು ಹೇಳಿದ್ದಾರೆ.