ಹೈದರಾಬಾದ್: “ನನ್ನ ವಂಶೋದ್ಧಾರ ಮಾಡಲು ಮೊಮ್ಮಗ ಬೇಕು”, “ಈಗಿರುವ ಮೊಮ್ಮಕ್ಕಳೆಲ್ಲ ಹೆಣ್ಣುಮಕ್ಕಳಾಗಿರುವ ಕಾರಣ ನನ್ನ ಮನೆ ಲೇಡೀಸ್ ಹಾಸ್ಟೆಲ್ನಂತೆ ಭಾಸವಾಗುತ್ತಿದೆ” ಎಂಬ ತೆಲುಗು ನಟ, ಮೆಗಾಸ್ಟಾರ್ ಚಿರಂಜೀವಿ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೊಂದು “ಸೆಕ್ಸಿಸ್ಟ್” ಹೇಳಿಕೆ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಹ್ಮ ಆನಂದಮ್ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಚಿರಂಜೀವಿ ಅವರು ಈ ಹೇಳಿಕೆ ನೀಡಿದ್ದಾರೆ. “ನನಗೆ ಮನೆಯಲ್ಲಿದ್ದಾಗ, ನನ್ನ ಸುತ್ತಲೂ ಮೊಮ್ಮಕ್ಕಳು ತುಂಬಿದ್ದಾರೆ ಎಂದು ಅನಿಸುವುದೇ ಇಲ್ಲ; ನನಗೆ ಲೇಡೀಸ್ ಹಾಸ್ಟೆಲ್ನಲ್ಲಿದ್ದಂತೆ ಭಾಸವಾಗುತ್ತದೆ. ಸುತ್ತಲೂ ಹೆಣ್ಣುಮಕ್ಕಳೇ ತುಂಬಿಕೊಂಡಿರುವಾಗ ಮಧ್ಯೆ ಇರುವ ನಾನು ಆ ಹಾಸ್ಟೆಲ್ನ ವಾರ್ಡನ್ನಂತೆ ಅನಿಸುತ್ತದೆ. ಅದಕ್ಕೆ ನಾನು ಚರಣ್(ರಾಮ್ ಚರಣ್)ಗೆ, ಕನಿಷ್ಠ ಈ ಬಾರಿಯಾದರೂ ಗಂಡು ಮಗುವನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದೇನೆ. ನನ್ನ ವಂಶ ಉದ್ಧಾರ ಮಾಡಲು ಗಂಡು ಮಗು ಬೇಕು…. ಆದರೆ, ಮತ್ತೆ ರಾಮ್ಚರಣ್ ಎಲ್ಲಿ ಹೆಣ್ಣು ಮಗುವನ್ನೇ ಕೊಡುತ್ತಾನೋ ಎಂಬ ಭಯ ಶುರುವಾಗಿದೆ” ಎಂದಿದ್ದಾರೆ.

ಚಿರಂಜೀವಿ ಅವರ ಈ ಹೇಳಿಕೆಯ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದು, “ಚಿರಂಜೀವಿ ಅವರಿಗೆ ತಮ್ಮ ಮಗ ರಾಮ್ ಚರಣ್ಗೆ ಮತ್ತೆ ಹೆಣ್ಣುಮಗು ಆಗುತ್ತೋ ಎಂಬ ಭಯ ಕಾಡುತ್ತಿದೆಯಂತೆ. 2025ಕ್ಕೆ ಬಂದರೂ ಗಂಡು ಮಕ್ಕಳೇ ಬೇಕೆಂಬ, ಪುರುಷ ಉತ್ತರಾಧಿಕಾರಿಯೇ ಇರಬೇಕೆಂಬ ಗೀಳು ಮುಂದುವರಿದಿದೆ. ಅವರ ಹೇಳಿಕೆ ನಿರಾಸೆ ಮೂಡಿಸಿತು, ಆದರೆ ಆಶ್ಚರ್ಯ ಆಗಲಿಲ್ಲ. ಅಂದ ಹಾಗೆ, ನನಗೂ ಇರುವುದು ಒಂದು ಹೆಣ್ಣುಮಗು. ಮುಂದಿನ ಬಾರಿಯಾದರೂ ಗಂಡಾಗಲಿ ಎಂದು ನೂರಾರು ಮಂದಿ ಒತ್ತಡ ಹಾಕುವುದು ನೋಡಿ ಅಸಹ್ಯ ಎನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಟ್ವೀಟರ್ನಲ್ಲಿ ಚಿರಂಜೀವಿ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿರಂಜೀವಿ ಅವರಿಗೆ ಶ್ರೀಜಾ ಕೋನಿಡೆಲಾ ಮತ್ತು ಸುಷ್ಮಿತಾ ಕೋನಿಡೆಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶ್ರೀಜಾಗೆ ನವಿಷ್ಕಾ, ನಿವ್ರತಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರೆ, ಸುಷ್ಮಿತಾಗೆ ಸಮಾರಾ ಮತ್ತು ಸಂಹಿತ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಚಿರಂಜೀವಿ ಪುತ್ರ ರಾಮ್ಚರಣ್ ಮತ್ತು ಉಪಾಸನಾ ದಂಪತಿ ಕೂಡ 2023ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆಗ ಚಿರಂಜೀವಿ ಅವರು, “ಪುಟಾಣಿ ಮೆಗಾ ರಾಜಕುಮಾರಿಗೆ ಸ್ವಾಗತ! ನಿನ್ನ ಆಗಮನದ ಮೂಲಕ ನಮ್ಮ ಮೆಗಾ ಕುಟುಂಬದಲ್ಲಿ ಸಂತೋಷದ ನಗೆ ಚಿಮ್ಮಿದೆ” ಎಂದು ಬರೆದುಕೊಂಡಿದ್ದರು.