ಕಲಬುರಗಿ: ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಗೆ (DK Shivakumar) ಅಧಿಕಾರ ಹಸ್ತಾಂತರಿಸಬೇಕು ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದ್ದು ಬಾರೀ ಚರ್ಚೆಗೆ ಕಾರಣವಾಗಿತ್ತು. ಸದ್ಯ ಇದರ ಬೆನ್ನಲ್ಲಿಯೇ ಈಗ ಮಠಾಧೀಶರು ತಮ್ಮ ತಮ್ಮ ಸಮುದಾಯದ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಶನಿವಾರವಷ್ಟೇ ಶ್ರೀಶೈಲ ಶ್ರೀಗಳು ಲಿಂಗಾಯತರನ್ನು ಸಿಎಂ ಮಾಡಿ ಅಂತ ಹೇಳಿದ್ದರು. ಭಾನುವಾರ ರಂಭಾಪುರಿ ಶ್ರೀಗಳು (Rambhapuri Shree) ಲಿಂಗಾಯತ ಸಿಎಂ ದಾಳ ಉರುಳಿಸಿದ್ದಾರೆ. ಸಿಎಂ ಸ್ಥಾನ ಬದಲಾವಣೆ ಸನ್ನಿವೇಶ ಬಂದರೆ ವೀರಶೈವ ಲಿಂಗಾಯತ (Veershaiv Lingayat) ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್ (Congress High Command) ಆದ್ಯತೆ ನೀಡಬೇಕೆಂದು ಬಾಳೆ ಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಸಿಎಂ ಸ್ಥಾನ ಲಿಂಗಾಯತರಿಗೆ ನೀಡಲು ಆಗದೇ ಇದ್ದರೆ ಡಿಸಿಎಂ ಸ್ಥಾನವಾದರೂ ನೀಡಬೇಕು. ಸದ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಒಳ್ಳೆಯ ಸಚಿವ ಸ್ಥಾನಗಳನ್ನು ನೀಡಿಲ್ಲ. ಸಿಎಂ ಅವರು ಕೆಲವೇ ಸಮುದಾಯದ ಜನರಿಗೆ ತುಷ್ಟೀಕರಣ ಮಾಡದೇ ಎಲ್ಲರನ್ನು ಸಮಾನಾಗಿ ಕಾಣಬೇಕು ಎಂದು ಸಲಹೆ ನೀಡಿದ್ದಾರೆ.
ಕೆಲವು ಹಗರಣ, ಬೆಲೆ ಏರಿಕೆಯಿಂದ ಜನರಿಂದ ಸರ್ಕಾರ ಸುಲಿಗೆ ಹೆಚ್ಚಾಗಿ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಂದ (Congress Guarantee) ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಸರ್ಕಾರ ಜನರನ್ನು ದುಡಿಯುವಂತೆ ಮಾಡಬೇಕು ಸೋಮಾರಿತನ ಬರುವಂತೆ ಮಾಡಬಾರದು ಎಂದು ಗ್ಯಾರಂಟಿ ವಿರುದ್ಧ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
