ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಬೀರೂರು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿ ಇಂದು ಬೆಳಗಿನ ಜಾವ ಹೊರಬಿದ್ದಿದೆ. ಈ ಬಾರಿ ʼಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು, ಸರ್ವರೂ ಎಚ್ಚರದಿಂದಿರಬೇಕು ಪರಾಕ್ʼ ಎಂದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಅವರು ನುಡಿದಿದ್ದಾರೆ.

ಇದೀಗ ಮೈಲಾರ ಲಿಂಗೇಶ್ವರ ಸ್ವಾಮಿ ದೇವಾಲಯದ ಅರ್ಚಕ ವಿಜೇತ್ ಅವರು ಸಮಾಜದ ಆಗು ಹೋಗುಗಳ ಬಗ್ಗೆ ಸುಳಿವು ಕೊಡುವ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದಾರೆ. ಎರಡು ಎಚ್ಚರಿಕೆ ನುಡಿ, ಒಂದು ಶುಭ ಸಂದೇಶ ಎಂದು ಅರ್ಚಕರು ವಿವರಿಸಿದ್ದಾರೆ.
ಧರ್ಮದ ಸಂಘರ್ಷವನ್ನು ಮುಂದಿನ ದಿನದಲ್ಲಿ ನೋಡಲಿದ್ದೇವೆ, ಅಧರ್ಮವೇ ಹೆಚ್ಚುತ್ತಾ ಧರ್ಮ ಸಂಕಟದಲ್ಲಿ ಸಿಲುಕುತ್ತದೆ, ವಿಶ್ವದ ಬೇರೆ ಬೇರೆ ದೇಶಗಳ ನಡುವೆ ಯುದ್ಧ ಹಾಗೂ ಸೈನಿಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ಕಾರ್ಣಿಕ ನುಡಿಯ ಪ್ರಕಾರ ಜಗತ್ತು ಯುದ್ಧಭೀತಿ ಎದುರಿಸಲಿದೆ, ಸುಭೀಕ್ಷ ಮಳೆಯಾಗಲಿದೆ. ಕೊನೆಗೆ ಧರ್ಮಕ್ಕೆ ಜಯವಾಗಲಿದೆ ಎಂಬುದಾಗಿದೆ ಎನ್ನುವುದು ಜಾನಪದ ತಜ್ಞರ ಅಂಬೋಣ. ಒಟ್ಟಾರೆ ಎಲ್ಲರೂ ಬನ್ನಿ ಕೊಟ್ಟು ಬಂಗಾರ ತೆಗೆದುಕೊಳ್ಳೋ ದಸರಾದ ನಿರೀಕ್ಷೆಯಲ್ಲಿದ್ದರೆ ಲೋಕಕ್ಕೆ ಯುಗಾದಿಯ ಸಂಕಷ್ಟದ ಬೇವನ್ನು ಒಂದು ಕಡೆ ಸಂತಸದ ಬೆಲ್ಲವನ್ನು ಮತ್ತೊಂದು ಕಡೆ ದಸರಾದಲ್ಲೇ ಉಣಿಸಿಬಿಟ್ಟಿದ್ದಾನೆ ಪರಮಾತ್ಮ ಮೈಲಾರಲಿಂಗೇಶ್ವರ!



















