ಬೆಂಗಳೂರು: ನಟಿ ರನ್ಯಾರಾವ್ ಶಿಷ್ಟಾಚಾರ ಸೌಲಭ್ಯ (ಪ್ರೋಟೋಕಾಲ್) ಪಡೆದಿದ್ದು ಡಿಜಿಪಿ ರಾಮಚಂದ್ರರಾವ್ ಗೆ ತಿಳಿದಿತ್ತು. ಆದರೆ, ನಿರ್ಬಂಧ ಹೇರುವಂತೆ ನಿರ್ದೇಶನ ನೀಡಿದ್ದಕ್ಕೆ ಅಥವಾ ರನ್ಯಾಗೆ ಪ್ರೋಟೋಕಾಲ್ ನೀಡುವಂತೆ ಪೊಲೀಸರಿಗೆ ಸೂಚಿಸಿರುವುದಕ್ಕೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.
ಪ್ರೋಟೋಕಾಲ್ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ವಿಚಾರಣಾ ತಂಡ ರಾಜ್ಯ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ರನ್ಯಾ ಶಿಷ್ಟಾಚಾರ ಪಡೆದಿದ್ದರೂ ತಪಾಸಣೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ಬಂಧವಿರಲಿಲ್ಲ. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ತಮ್ಮ ಕರ್ತವ್ಯ ಮೆರೆಯಬಹುದಿತ್ತು. ಆದರೂ ಪೊಲೀಸ್ ಶಿಷ್ಟಾಚಾರ ಬಳಸಿಕೊಂಡು ರನ್ಯಾ ಚಿನ್ನ ಕಳ್ಳ ಸಾಗಣೆ ಮಾಡಿದ್ದಾರೆಂಬ ಆರೋಪ ನಿರಾಧಾರವಾಗಿದೆ ಎಂದು ಪರೋಕ್ಷವಾಗಿ ಕೇಂದ್ರದ ಕಸ್ಟಮ್ಸ್ ವಿಭಾಗದ ಲೋಪದ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಷ್ಟಾಚಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, 230 ಪುಟಗಳ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಪಡೆದಿದ್ದರೂ ಅಧಿಕಾರಿ ಅಥವಾ ಅವರ ಕುಟುಂಬದವರಿಗೆ ಕಸ್ಟಮ್ಸ್ ತಪಾಸಣೆ ವಿನಾಯಿತಿ ಇರುವುದಿಲ್ಲ. ಕಸ್ಟಮ್ಸ್ ಬಯಸಿದರೆ ಪೊಲೀಸ್ ಅಧಿಕಾರಿಗಳನ್ನೂ ತಪಾಸಣೆಗೊಳಪಡಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ, ಈ ಕೃತ್ಯದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಲೋಪವೂ ಹೆಚ್ಚಿದೆ ಎಂದು ವರದಿ ಮೂಲಕ ಹೇಳಲಾಗಿದೆ.
ವರದಿಯಲ್ಲಿ ಏನಿದೆ?
- ರನ್ಯಾರಾವ್ ಶಿಷ್ಟಾಚಾರ ಸೌಲಭ್ಯ ಪಡೆದಿದ್ದು ಡಿಜಿಪಿಗೆ ಗೊತ್ತಿತ್ತು
- ಕೊಡಬೇಡಿ ಎಂದು ಪೊಲೀಸರಿಗೆ ಸೂಚಿಸಿರಲಿಲ್ಲ
- ಶಿಷ್ಟಾಚಾರ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಕ್ಕೂ ಪುರಾವೆ ಇಲ್ಲ
- ಶಿಷ್ಟಾಚಾರ ಪಡೆದಿದ್ದರೂ ತಪಾಸಣೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ಬಂಧ ಇರಲಿಲ್ಲ