ಬೆಂಗಳೂರು: ಅಂದುಕೊಂಡಂತೆ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸಿದೆ.
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಪುನರ್ ನಾಮಕರಣ ಮಾಡುವ ಕುರಿತು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಚರ್ಚೆ ನಡೆಸಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗಷ್ಟೇ ಈ ಕುರಿತು ಚಿಂತನೆ ನಡೆದಿದೆ ಹಾಗೂ ಅದರ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದರು.
ಆದರೆ, ಈಗ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಗೆ ಠಕ್ಕರ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಎಲ್ಲ ವಿಷಯಗಳು ಮೊದಲಿನಂತೆಯೇ ಇರಲಿವೆ. ಆದರೆ, ಹೆಸರು ಮಾತ್ರ ಬದಲಾಗಲಿದೆ ಎಂದು ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲಾಗಿದೆಯಷ್ಟೇ ಎಂದು ಹೇಳಿದ್ದಾರೆ. ಇದು ಜಿಲ್ಲೆಯ ಜನರ ಆಶಯ ಕೂಡ ಆಗಿತ್ತು ಎಂದು ಅವರು ಹೇಳಿದ್ದಾರೆ.