ನವದೆಹಲಿ ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಆರು ರನ್‌ಗಳಿಂದ ಸೋಲಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಈ ಐತಿಹಾಸಿಕ ವಿಜಯದ ನಂತರ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿ, ಅವರನ್ನು ಟೀಕಿಸಿದವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಆರ್‌ಸಿಬಿ ಗೆಲುವಿನ ನಂತರ ಮಾತನಾಡಿದ ರಾಜೀವ್ ಶುಕ್ಲಾ, “ಸೋಲು, ಗೆಲುವು, ಟ್ರೋಲ್, ಮುಖಭಂಗ ಸೇರಿದಂತೆ ಎಲ್ಲವನ್ನೂ ನೋಡಿದ ಆರ್‌ಸಿಬಿಯ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಆರ್‌ಸಿಬಿ ಮಾಲೀಕರಿಂದ ಹಿಡಿದು ಎಲ್ಲಾ ಆಟಗಾರರು, ಮ್ಯಾನೇಜ್‌ಮೆಂಟ್, ಕೋಚ್, ಸ್ಟಾಫ್ ಎಲ್ಲರೂ ಬದಲಾಗಿದ್ದಾರೆ. ಆದರೆ, ಮೊದಲ ಆವೃತ್ತಿಯಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಆಡಿದ್ದಾರೆ.
ಅವರು ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಜನರು ಅವರನ್ನು ಹೆಚ್ಚಾಗಿ ಟೀಕಿಸುತ್ತಿದ್ದರು, ‘ಅವರು ಒಳ್ಳೆಯ ನಾಯಕನಲ್ಲ, ಅವರು ಐಪಿಎಲ್ ತಂಡಕ್ಕೆ ಸರಿಯಾದವರಲ್ಲ’ ಎಂದು ಹೇಳುತ್ತಿದ್ದರು. ಫೈನಲ್ ಪಂದ್ಯದಲ್ಲಿಯೂ ಅವರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದಕ್ಕೆ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಟೀಕೆಗಳನ್ನು ಮಾಡಿದ್ದರು,” ಎಂದರು.
ಶುಕ್ಲಾ ಮುಂದುವರಿದು, “ಆದರೆ ಏನೇ ಇರಲಿ, ಆರ್‌ಸಿಬಿ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಮತ್ತು ಜನಪ್ರಿಯತೆಯನ್ನು ಹೊಂದಿರುವುದು ವಿರಾಟ್ ಅವರ ಕಾರಣದಿಂದಾಗಿ. ಪ್ರಪಂಚದಾದ್ಯಂತ ಜನರು ಈ ತಂಡವನ್ನು ಅನುಸರಿಸುತ್ತಾರೆ ಏಕೆಂದರೆ ಅದು ಕೊಹ್ಲಿ ಕಾರಣದಿಂದಾಗಿ. ವಿರಾಟ್ ತಂಡ ಎಲ್ಲಿ ಪಂದ್ಯ ಆಡಿದರೂ, ಅದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತದೆ” ಎಂದು ಹೇಳುವ ಮೂಲಕ ಇದುವರೆಗೂ ಕೊಹ್ಲಿಯನ್ನು ಟೀಕಿಸಿದವರಿಗೆ ರಾಜೀವ್ ಶುಕ್ಲಾ ಸರಿಯಾಗಿ ಚಾಟಿ ಬೀಸಿದರು.
ವಿರಾಟ್ ಕೊಹ್ಲಿ ಅವರ ನಿಷ್ಠೆಯ ಮಾತು:
ಆರ್‌ಸಿಬಿ ಫೈನಲ್ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮ ತಂಡದೊಂದಿಗಿನ ಬಾಂಧವ್ಯವನ್ನು ವಿವರಿಸಿದರು. “ನಾನು ಆರ್‌ಸಿಬಿ ತಂಡಕ್ಕೆ ನಿಷ್ಠೆಯಿಂದ ಆಡಿದ್ದೇನೆ. ಎಲ್ಲರೂ ಇತರ ತಂಡಕ್ಕೆ ಹರಾಜಾಗುತ್ತಿದ್ದರು. ತಂಡ ಟ್ರೋಫಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೊಂದು ತಂಡಕ್ಕೆ ಹೋಗುವ ಆಲೋಚನೆ ಬಂದಿದ್ದು ಸುಳ್ಳಲ್ಲ. ಆದರೆ, ದೃಢ ನಿರ್ಧಾರದಿಂದ ಆರ್‌ಸಿಬಿಯಲ್ಲೇ ಉಳಿದೆ. ನನ್ನ ಮನಸ್ಸು, ಹೃದಯ, ಆತ್ಮ ಬೆಂಗಳೂರಿನೊಂದಿಗೆ ಬೆಸೆದು ಕೊಂಡಿದೆ. ತಂಡ ಕೊನೆಗೂ ಕಪ್ ಗೆದ್ದ ಖುಷಿಯಲ್ಲಿ ನಾನು ಮಗುವಿನಂತೆ ನಿದ್ರಿಸುತ್ತೇನೆ,” ಎಂದು ಕೊಹ್ಲಿ ಭಾವುಕರಾಗಿ ಹೇಳಿದರು.



















