ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ(Rajiv Gandhi) ಅವರ ವಿದ್ಯಾರ್ಹತೆ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಕಾಂಗ್ರೆಸ್‌ಗೆ ಚುಚ್ಚಿದ್ದಾರೆ. ರಾಜೀವ್ ಗಾಂಧಿ(Rajiv Gandhi) ಅವರು ಪ್ರಧಾನಮಂತ್ರಿ ಹುದ್ದೆಗೇರಿದಾಗ, ನಾನು ಮತ್ತು ಇನ್ನೂ ಕೆಲವರು ಅವರ ಅರ್ಹತೆಯ ಕುರಿತು ಪ್ರಶ್ನೆಯೆತ್ತಿದ್ದೆವು. ಒಬ್ಬ ವಿಮಾನದ ಪೈಲಟ್, ಅದರಲ್ಲೂ ಎರಡು ಬಾರಿ ಅನುತ್ತೀರ್ಣಗೊಂಡವರು ಹೇಗೆ ಪ್ರಧಾನಿ ಹುದ್ದೆಗೇರಿದರು ಎಂದು ನಾವು ಕೇಳಿದ್ದೆವು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದು, ಅದರ ವಿಡಿಯೋವನ್ನು ಬಿಜೆಪಿ ಐಟಿ ಘಟಕದ ಅಧ್ಯಕ್ಷ ಅಮಿತ್ ಮಾಳವೀಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲವಾದರೂ, ಕಾಂಗ್ರೆಸ್ ಈ ಹೇಳಿಕೆಯನ್ನು ಅಪ್ರಸ್ತುತ ಎಂದು ಹೇಳಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಭಾರತದ ಉನ್ನತ ನಾಯಕರಲ್ಲಿ ಒಬ್ಬರೆಂದು ಸಮರ್ಥಿಸಿಕೊಂಡಿದೆ.
ವಿಡಿಯೋ ಸಂದರ್ಶನದ ತುಣುಕನ್ನು ಹಂಚಿಕೊಂಡಿರುವ ಮಾಳವೀಯ, “ರಾಜೀವ್ ಗಾಂಧಿ(Rajiv Gandhi) ಶೈಕ್ಷಣಿಕವಾಗಿ ಬಹಳ ತ್ರಾಸ ಪಟ್ಟಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ಉತ್ತೀರ್ಣರಾಗುವುದು ಬಹಳ ಸುಲಭ, ಹೀಗಿದ್ದರೂ ಅವರು ಅಲ್ಲಿ ಫೇಲ್ ಆಗಿದ್ದರು. ಅಷ್ಟೇ ಅಲ್ಲ, ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲೂ ಅನುತ್ತೀರ್ಣರಾಗಿದ್ದರು. ಈ ರೀತಿಯ ಶೈಕ್ಷಣಿಕ ದಾಖಲೆ ಹೊಂದಿರುವ ಯಾರಾದರೂ ಪ್ರಧಾನಿಯಾಗಲು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದರಂತೆ. ಈಗಲಾದರೂ ನಿಜ ಬಣ್ಣ ಬಯಲಾಯಿತಲ್ಲವೇ” ಎಂದು ಬರೆದುಕೊಂಡಿದ್ದಾರೆ.
ರಾಜೀವ್ ಗಾಂಧಿ ಬಗ್ಗೆ ‘ದಿ ರಾಜೀವ್ ಐ ನೋ’ ಎಂಬ ಪುಸ್ತಕವನ್ನು ಬರೆದಿರುವ ಅಯ್ಯರ್ ಅವರ ಪ್ರಕಾರ, ಕಾಂಗ್ರೆಸ್ ‘ಮಾಹಿತಿ ಕ್ರಾಂತಿಯ ಪಿತಾಮಹ’ ಎಂದು ಕರೆಯುವ ತಮ್ಮ ನಾಯಕ ದಿವಂಗತ ರಾಜೀವ್ ಗಾಂಧಿ ವಾಸ್ತವದಲ್ಲಿ ಶೈಕ್ಷಣಿಕವಾಗಿ ತೀರಾ ದುರ್ಬಲರಾಗಿದ್ದರು. ಅಂತಹ ವ್ಯಕ್ತಿಯನ್ನು ಹೇಗೆ ಪ್ರಧಾನಿಯನ್ನಾಗಿ ಮಾಡಲಾಯಿತು ಎನ್ನುವುದು ನನಗೆ ಆಶ್ಚರ್ಯ ಉಂಟುಮಾಡಿದ ಸಂಗತಿ ಎಂದು ಹೇಳಿಕೊಂಡಿದ್ದಾರೆ,
ಇದನ್ನೂ ಓದಿ: Gold Scam: 90 ದಿನಗಳಲ್ಲಿ 25 ಕೋಟಿ ರೂ. ಪಾವತಿಸಿ ಅಥವಾ ಜೈಲಿಗೆ ಹೋಗಿ: ಚಿನ್ನದ ಹಗರಣದ ಆರೋಪಿಗೆ ಸುಪ್ರೀಂ ಕೋರ್ಟ್
ವೀಡಿಯೊದಲ್ಲಿ ಅಯ್ಯರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ಅಯ್ಯರ್ ಅವರಿಗೆ ಪಕ್ಷದಲ್ಲಿ ಈಗ ಯಾವುದೇ ಪ್ರಸ್ತುತತೆ ಇಲ್ಲ ಎಂದಿದ್ದಾರೆ. ಅವರು ಯಾವುದೇ ಮಹತ್ವದ ಸ್ಥಾನವನ್ನು ಹೊಂದಿಲ್ಲ. ಆದ್ದರಿಂದ ಅವರ ಹೇಳಿಕೆಗೆ ಹೆಚ್ಚು ಗಮನ ನೀಡುವ ಅಗತ್ಯವಿಲ್ಲ ಎಂದು ಪಕ್ಷದ ನಾಯಕ ಅಜಯ್ ಸಿಂಗ್ ಯಾದವ್ ಹೇಳಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಅವರು ಪ್ರತಿಕ್ರಿಯಿಸಿ, “ಅತ್ಯುತ್ತಮ ವ್ಯಕ್ತಿಗಳೂ ಕೆಲವೊಂದು ವಿಷಯದಲ್ಲಿ ಫೇಲ್ ಆಗುತ್ತಾರೆ. ಆದರೆ ರಾಜೀವ್ ಗಾಂಧಿ ಅವರು “ರಾಜಕೀಯದಲ್ಲಿ ಎಂದಿಗೂ ವಿಫಲರಾಗಲಿಲ್ಲ” ಎಂದು ಹೇಳಿದ್ದಾರೆ. “ವಿಫಲವಾಗುವುದು ದೊಡ್ಡ ವಿಷಯವಲ್ಲ; ಉತ್ತಮ ವ್ಯಕ್ತಿಗಳೂ ಕೆಲವೊಮ್ಮೆ ಸೋಲುತ್ತಾರೆ. ಅವರಿಗೆ ರಾಜಕೀಯ ಜವಾಬ್ದಾರಿಯನ್ನು ನೀಡಲಾಯಿತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ನನ್ನ ಪ್ರಕಾರ, ನಮ್ಮ ದೇಶದಲ್ಲಿ ಕೇವಲ ಐದು ವರ್ಷಗಳಲ್ಲಿ ದೊಡ್ಡಮಟ್ಟಿನ ಸಾಧನೆ ಮಾಡಿದ ಕೆಲವೇ ಕೆಲವು ಪ್ರಧಾನ ಮಂತ್ರಿಗಳ ಪೈಕಿ ರಾಜೀವ್ ಗಾಂಧಿಯೂ ಒಬ್ಬರು” ಎಂದು ಹೇಳಿದರು.