ದಾವಣಗೆರೆ : ಸರ್ವಾಧಿಕಾರಿ ರಾಹುಲ್ ಗಾಂಧಿ ಮೌಖಿಕ ಸೂಚನೆಯಿಂದ ರಾಜಣ್ಣಅವರನ್ನು ವಜಾಗೊಳಿಸಲಾಗಿದೆ. ಇದು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ದೊಡ್ಡ ಅಪಮಾನ ಎಂದು ರಾಹುಲ್ ಗಾಂಧಿ ವಿರುದ್ಧ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ದೇಶದ ಇತಿಹಾಸದಲ್ಲಿ ನೋಡಿದರೆ ರಾಗಾ ಅವರ ಕುಟುಂಬದ ಸರ್ವಾಧಿಕಾರದ ಬಗ್ಗೆ ತಿಳಿಯುತ್ತದೆ. “ಕಾಗೆ ಕಪ್ಪಾಗಿದೆ ಎಂದಿದ್ದಕ್ಕೆ ರಾಜಣ್ಣ ತಲೆದಂಡ”ವಾಯಿತು, ಕಾಗೆ ಕಪ್ಪಿದ್ದರೂ ಬೆಳ್ಳಗೆ ಇದೆ ಎಂದು ಹೇಳಬೇಕೆ ? ಎಂದು ಅವರ ಕಾಂಗ್ರೆಸ್ ಮನಸ್ಥಿತಿಯನ್ನು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅನಗತ್ಯವಾಗಿ ಆರೋಪ ಮಾಡಿದ ನಂತರ ಪಲಾಯನವಾದ ಮಾಡುತ್ತಿದ್ದಾರೆ. ಆಂದ್ರ, ತೆಲಂಗಾಣನಲ್ಲಿ ಪಾರದರ್ಶಕವಾಗಿ ಚುನಾವಣೆ ಆಗಿಲ್ಲವೆ? ನಿಮ್ಮ ಹೇಳಿಕೆ ಬಾಲಿಶ, ರಾಹುಲ್ ಸಂವಿಧಾನ ವಿರೋಧಿ ಎಂದು ವಿರುದ್ಧ ಕಿಡಿಕಾರಿದ್ದಾರೆ.
ರಾಜಣ್ಣ ನೇರವಾಗಿ ಮಾತನಾಡುವ ಮನುಷ್ಯ, ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದಲೇ ರಾಜಣ್ಣ ತಲೆದಂಡ ಆಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇತ್ತು, ಕರಡು ಪ್ರತಿ ಕೊಟ್ಟಾಗಲೆ ವಿರೋಧ ಮಾಡಬೇಕಿತ್ತು ಎಂದಿದ್ದು ತಪ್ಪಲ್ಲ. ರಾಜಣ್ಣ ಅವರಿಂದ ವಿವರಣೆ ಕೇಳದೆ ವಜಾ ಮಾಡಿದ್ದಾರೆ. ರಾಜಣ್ಣ ಏನು ತಪ್ಪು ಮಾಡಿದ್ದರು, ರಾಹುಲ್ ಗಾಂಧಿ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಎಂದು ರಾಜಣ್ಣ ಹೇಳಿದ್ದರು, ಕಾಂಗ್ರೆಸ್ ಪಕ್ಷದವರ ಆಂತರಿಕ ಕಚ್ಚಾಟಕ್ಕೆ ರಾಜಣ್ಣ ಅವರನ್ನು ಬಲಿ ಕೊಟ್ಟಿದ್ದಾರೆ. ರಾಗಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜಣ್ಣನನ್ನು ವಜಾ ಮಾಡಲಾಗಿದ್ದು, ರಾಜ್ಯದ ಪ್ರಜ್ಞಾವಂತ ಮತದಾರರು ಮುಂದಿನ ದಿನದಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜಣ್ಣ ವಜಾ ಮಾಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ಕೆ ಎನ್ ರಾಜಣ್ಣ ಪರ ವಹಿಸಿ ಮಾತನಾಡಿದ್ದಾರೆ.

















