ರಾಮನಗರ: ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ. ಅವರ ಬ್ರೈನ್ ಮ್ಯಾಪಿಂಗ್ ಮಾಡಿದರೆ ಸತ್ಯ ಗೊತ್ತಾಗುತ್ತದೆ. ಅವರು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೆ.ಎನ್.ರಾಜಣ್ಣರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೇರುತ್ತಿರುವ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕೃಷ್ಣ, ನನಗಿರುವ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದ್ದಕ್ಕೆ ಅವರು ವಜಾ ಆಗಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಹೋಗುವ ಮುನ್ನ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗೇನೋ ದೆಹಲಿಯಲ್ಲಿ ಸಮಾವೇಶ ಮಾಡುತ್ತಾರಂತೆ ಮಾಡಲಿ. ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಹುತ್ತಿದ್ದಾರಾ? ಇಲ್ಲವೋ? ಎಂದು ಅವರನ್ನೇ ಕೇಳಿ. ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲಾ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜಣ್ಣ ಅವರನ್ನು ಸ್ವಾಗತ ಮಾಡುತ್ತಿರುವುದು ಬಿಜೆಪಿ ನಾಯಕರೇ ಅಲ್ಲವೇ? ರಾಜಣ್ಣ ಈ ಹಿಂದೆ ನನಗೆ ಯಾವ ಪಕ್ಷದ ಅವಶ್ಯಕತೆಯೂ ಇಲ್ಲ ಎಂದಿದ್ದರು. ಈಗ ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಬೇಕು. ನೂರಕ್ಕೆ ನೂರರಷ್ಟು ಅವರು ಬಿಜೆಪಿಗೆ ಸೇರುತ್ತಾರೆ. ನಮ್ಮ ಸರ್ಕಾರ ಇಲ್ಲ ಎಂದಿದ್ದರೆ ಇಷ್ಟೊತ್ತಿಗೆ ಅವರು ಬಿಜೆಪಿ ಸೇರಿರುತ್ತಿದ್ದರು. ಈಗಾಗಲೇ ಒಂದು ಕಾಲು ಅವರು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಜೊತೆಗೆ ಬಿಜೆಪಿ ಕೇಂದ್ರ, ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
ಕೆ.ಎನ್.ರಾಜಣ್ಣ ಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂದು ಎಲ್ಲರಿಗೂ ಗೊತ್ತಿದೆ. ಅವರ ನಡವಳಿಕೆ, ಮಾತು ಯಾವ ರೀತಿಯಿತ್ತು ಎನ್ನುವುದು ಕೂಡ ಗೊತ್ತಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವ ಹಾಗೇ ಅವರು ಮಾತಾಡುತ್ತಿದ್ದರು. ಅವರ ಮಾತಿನಿಂದಲೇ ಅವರು ಕೆಟ್ಟಿರುವುದು, ಅದರ ಹಿಂದೆ ಯಾರ ಷಡ್ಯಂತ್ರವೂ ಇಲ್ಲ ಎಂದು ತಿಳಿಸಿದ್ದಾರೆ.