ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದ್ದಂತೆ ಬಿಜೆಪಿಯಲ್ಲಿ ಕೂಡ ಅಸಮಾಧಾನದ ಹೊಗೆ ಆವರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಿತರ ಬಂಡಾಯ ಶಮನಗೊಳಿಸಲು ಹೈಕಮಾಂಡ್ ಮುಂದಾಗಿದೆ. ಹೀಗಾಗಿ ತೆರೆಮರೆಯಲ್ಲಿ ಸದ್ದಿಲ್ಲದೇ ಬಿ.ಎಸ್. ಯಡಿಯೂರಪ್ಪ ಶಮನಗೊಳಿಸಲು ಮುಂದಾಗಿದ್ದಾರೆ.
ಕಳೆದ ವಾರ ಬಿ.ಎಸ್. ಯಡಿಯೂರಪ್ಪರ ಸೂಚನೆ ಮೇರೆಗೆ ಅರವಿಂದ ಲಿಂಬಾವಳಿ ಅವರನ್ನು ರಾಜ್ಯ ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ. ಡಾ. ಸಿ.ಎನ್. ಅಶ್ವಥ್ ನಾರಾಯಣ್ ನಿವಾಸದಲ್ಲಿ ಭೇಟಿಯಾಗಿ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಾರೆ.
ಅಮಿತ್ ಶಾ ಸೂಚನೆ ಮೇರೆಗೆ ಬಿಜೆಪಿಯಲ್ಲಿನ ಅಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಈಗ ಎರಡು ಬಣಗಳಿವೆ. ಒಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ, ಇನ್ನೊಂದು ವಿಜಯೇಂದ್ರ ವಿರೋಧಿ ಬಣ. ಅರವಿಂದ್ ಲಿಂಬಾವಳಿ ಅವರು ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅರವಿಂದ ಲಿಂಬಾವಳಿ ಮನವೊಲಿಕೆಗೆ ಯಡಿಯೂರಪ್ಪ ಮುಂದಾಗಿದ್ದಾರೆ. ಯಡಿಯೂರಪ್ಪರ ಅಣತಿಯಂತೆ ಅರವಿಂದ ಲಿಂಬಾವಳಿ ಜೊತೆಗೆ ರಾಜ್ಯ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ.