ನವದೆಹಲಿ: ಕನ್ನಡತಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರಾ ದಂಪತಿ ಮಥುರಾದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದು, ಈ ಭೇಟಿಯ ಸಂದರ್ಭದಲ್ಲಿ, ರಾಜ್ ಕುಂದ್ರಾ ಅವರು ತಮ್ಮ ಗುರುಗಳಿಗೆ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಲು ಮುಂದಾಗಿರುವ ಅಚ್ಚರಿಯ ಘಟನೆ ನಡೆದಿದೆ. ಪತಿಯ ಈ ಅನಿರೀಕ್ಷಿತ ಪ್ರಸ್ತಾಪದಿಂದ ಪತ್ನಿ ಶಿಲ್ಪಾ ಶೆಟ್ಟಿ ಆಶ್ಚರ್ಯಚಕಿತರಾಗಿ ನೋಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಶ್ರಮಕ್ಕೆ ಭೇಟಿ ನೀಡಿದ್ದಾಗ, ಪ್ರೇಮಾನಂದ ಮಹಾರಾಜ್ ಅವರು ತಮ್ಮ ಎರಡೂ ಕಿಡ್ನಿಗಳು ವಿಫಲವಾಗಿವೆ ಮತ್ತು ಕಳೆದ ಹತ್ತು ವರ್ಷಗಳಿಂದ ತಾವು ಈ ಸ್ಥಿತಿಯಲ್ಲಿಯೇ ಬದುಕುತ್ತಿರುವುದಾಗಿ ಬಹಿರಂಗಪಡಿಸಿದರು. ಇದರಿಂದ ಭಾವುಕರಾದ ರಾಜ್ ಕುಂದ್ರಾ, ತಕ್ಷಣವೇ ತಮ್ಮ ಒಂದು ಕಿಡ್ನಿಯನ್ನು ದಾನ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. ಇದನ್ನು ಕಂಡ ಶಿಲ್ಪಾ ಶೆಟ್ಟಿ ಅಚ್ಚರಿಗೊಂಡರು.
“ನಾನು ಕಳೆದ ಎರಡು ವರ್ಷಗಳಿಂದ ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ. ನಿಮ್ಮ ವಿಡಿಯೋಗಳೇ ನನ್ನ ಎಲ್ಲಾ ಅನುಮಾನ ಮತ್ತು ಭಯಗಳನ್ನು ದೂರಮಾಡುವುದರಿಂದ ನನಗೆ ಯಾವುದೇ ಪ್ರಶ್ನೆಗಳಿಲ್ಲ. ನೀವು ಅನೇಕರಿಗೆ ಸ್ಫೂರ್ತಿ. ನಿಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ನನಗೆ ತಿಳಿದಿದೆ, ಮತ್ತು ನಾನು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಾದರೆ, ನನ್ನ ಒಂದು ಕಿಡ್ನಿಯನ್ನು ನಿಮಗೆ ನೀಡಲು ಬಯಸುತ್ತೇನೆ” ಎಂದು ಕುಂದ್ರಾ ಹೇಳಿದರು.
ಈ ಹೃದಯಸ್ಪರ್ಶಿ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಪ್ರೇಮಾನಂದ ಮಹಾರಾಜ್, “ನೀವು ಸಂತೋಷವಾಗಿದ್ದರೆ ಅಷ್ಟೇ ಸಾಕು. ಸಮಯ ಬರುವವರೆಗೂ ನಾವು ಒಂದು ಕಿಡ್ನಿಗಾಗಿ ಈ ಜಗತ್ತನ್ನು ಬಿಟ್ಟು ಹೋಗುವುದಿಲ್ಲ. ಆದರೆ ನಿಮ್ಮ ಸದ್ಭಾವನೆಯನ್ನು ನಾನು ಪೂರ್ಣ ಹೃದಯದಿಂದ ಸ್ವೀಕರಿಸುತ್ತೇನೆ” ಎಂದು ಹೇಳಿ ಅವರನ್ನು ಹರಸಿದರು. ಆದರೆ, ಪತಿಯ ಪ್ರಸ್ತಾವನೆ ವೇಳೆ ಪತ್ನಿಯ ಮುಖಭಾವದ ವಿಡಿಯೋ ವೈರಲ್ ಆಗಿದ್ದು, ಜಾಲತಾಣಗಳಲ್ಲಿ ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

60 ಕೋಟಿ ವಂಚನೆ ಆರೋಪದ ಬೆನ್ನಲ್ಲೇ ಭೇಟಿ
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು 60 ಕೋಟಿ ರೂಪಾಯಿಗಳ ಆರ್ಥಿಕ ವಂಚನೆ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಈ ಆಶ್ರಮ ಭೇಟಿ ನಡೆದಿದೆ. 2015 ಮತ್ತು 2023ರ ನಡುವೆ ಉದ್ಯಮಿ ದೀಪಕ್ ಕೊಠಾರಿ ಎಂಬುವವರಿಗೆ ದಂಪತಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದಾಗ್ಯೂ, ಗುರುವಾರ ದಂಪತಿಯ ಪರವಾಗಿ ವಕೀಲ ಪ್ರಶಾಂತ್ ಪಾಟೀಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, “ನನ್ನ ಕಕ್ಷಿದಾರರ ಮೇಲಿನ ಎಲ್ಲ ಆರೋಪಗಳೂ ಆಧಾರರಹಿತ ಮತ್ತು ಸುಳ್ಳು. ಇದು ಸಂಪೂರ್ಣವಾಗಿ ಸಿವಿಲ್ ಸ್ವರೂಪದ ಪ್ರಕರಣವಾಗಿದ್ದು, ಈಗಾಗಲೇ ಎನ್‌ಸಿಎಲ್‌ಟಿ, ಮುಂಬೈನಲ್ಲಿ ಅಕ್ಟೋಬರ್ 4, 2024ರಂದು ಈ ಬಗ್ಗೆ ತೀರ್ಮಾನಿಸಿಯಾಗಿದೆ” ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು “ದುರುದ್ದೇಶಪೂರಿತ” ಎಂದೂ ಅವರು ಬಣ್ಣಿಸಿದ್ದಾರೆ.