ಮುಂಬೈ: 60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸೋಮವಾರ ಬಾಲಿವುಡ್ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿಯವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಸತತ 5 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದೆ. ಬ್ಯಾಂಕ್ ಖಾತೆಗಳ ವಿವರ, ವೆಚ್ಚ, ಹೂಡಿಕೆಗಳ ಕುರಿತಂತೆ ಕುಂದ್ರಾಗೆ ಹಲವು ಪ್ರಶ್ನೆಗಳು ಕೇಳಲಾಗಿವೆ.
ರಾಜ್ ಕುಂದ್ರಾ ವಿಚಾರಣೆಯಲ್ಲಿ 60 ಕೋಟಿ ರೂಪಾಯಿಯನ್ನು ಐದು ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸತ್ಯಯುಗ್ ಗೋಲ್ಡ್, ವಿಹಾನ್ ಇಂಡಸ್ಟ್ರೀಸ್, ಎಸೆನ್ಶಿಯಲ್ ಬಲ್ಕ್ ಕಮಾಡಿಟೀಸ್ ಪ್ರೈ.ಲಿ., ಬೆಸ್ಟ್ ಡೀಲ್, ಸ್ಟೇಟ್‌ಮೆಂಟ್ ಮೀಡಿಯಾ ಎಂಬ ಕಂಪನಿಗಳಲ್ಲಿ ಹೂಡಿರುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ, ಮಟುಂಗಾದಲ್ಲಿರುವ ಕಚೇರಿಯ ಬಾಡಿಗೆ, 3.15 ಕೋಟಿ ವೆಚ್ಚದಗೋದಾಮು, ಪ್ರಸಾರ ವೆಚ್ಚಗಳಿಗೆ 20 ಕೋಟಿ ರೂಪಾಯಿ, ಜೊತೆಗೆ ಒಬ್ಬ ಸಿನೆಮಾ ತಾರೆಗೆ 4 ಕೋಟಿ ರೂಪಾಯಿ “ವೇತನ” ನೀಡಿದ ಬಗ್ಗೆಯೂ ಕುಂದ್ರಾರನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಕುಂದ್ರಾ ಅವರು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ಗೆ ಮಾಡಿದ ಪಾವತಿ ಕುರಿತೂ ವಿಚಾರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ
2025ರ ಆಗಸ್ಟ್‌ನಲ್ಲಿ, ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಮುಂಬೈ ಮೂಲದ ಉದ್ಯಮಿ ದೀಪಕ್ ಕೋಠಾರಿ ನೀಡಿದ ದೂರನ್ನು ಆಧರಿಸಿ ವಂಚನೆ ಪ್ರಕರಣ ದಾಖಲಿಸಿತ್ತು. 2015ರಿಂದ 2023ರವರೆಗೆ ‘ಬೆಸ್ಟ್ ಡೀಲ್ ಟಿವಿ ಪ್ರೈ.ಲಿ.’ ಸಂಸ್ಥೆಯ ಮೂಲಕ ವ್ಯಾಪಾರ ವಿಸ್ತರಣೆ ಹೆಸರಿನಲ್ಲಿ 60.4 ಕೋಟಿ ರೂ. ಹೂಡಿಕೆ ಮಾಡಿಸಲಾಗಿದೆ. ಆದರೆ ಆ ಹಣವನ್ನು ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿದ್ದಾರೆಂದು ದೀಪಕ್ ಕೊಠಾರಿ ಆರೋಪಿಸಿದ್ದಾರೆ.
ಕುಂದ್ರಾ – ಶೆಟ್ಟಿ ಪ್ರತಿಕ್ರಿಯೆ
ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಯ ಪರವಾಗಿ ವಕೀಲ ಪ್ರಶಾಂತ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, “ಇದು ಹಳೆಯ ಒಪ್ಪಂದ. ಕಂಪನಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಈ ಕುರಿತ ಪ್ರಕರಣ ಈಗಾಗಲೇ ಮುಂಬೈ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದೆ. ಇದರಲ್ಲಿ ಯಾವುದೇ ಕ್ರಿಮಿನಲ್ ಅಂಶ ಇಲ್ಲ. ಅಗತ್ಯ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ,” ಎಂದು ತಿಳಿಸಿದ್ದಾರೆ. ಅಲ್ಲದೇ ಈ ದೂರು ದುರುದ್ದೇಶದಿಂದ ಕೂಡಿದ್ದು ಎಂದೂ ಆರೋಪಿಸಿದ್ದಾರೆ.


















