ರಾಯ್ಪುರ: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸುವುದರೊಂದಿಗೆ, ವಿರಾಟ್ ಕೊಹ್ಲಿ ಅವರ ವಿಶಿಷ್ಟ ದಾಖಲೆಯೊಂದು ಅಂತ್ಯಗೊಂಡಿದೆ. ಕಳೆದ 6 ವರ್ಷ ಮತ್ತು 9 ತಿಂಗಳುಗಳಿಂದ ವಿರಾಟ್ ಕೊಹ್ಲಿ ಶತಕ ಬಾರಿಸಿದಾಗಲೆಲ್ಲಾ ಭಾರತ ಗೆಲ್ಲುತ್ತಿತ್ತು. ಆದರೆ, ಈ ಬಾರಿ ಕೊಹ್ಲಿ ಅವರ ಅಮೋಘ 102 ರನ್‌ಗಳ ಶತಕದ ಹೊರತಾಗಿಯೂ ಭಾರತಕ್ಕೆ ಗೆಲುವು ದಕ್ಕಲಿಲ್ಲ.
ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ ಶತಕ ಬಾರಿಸಿದ ಪಂದ್ಯದಲ್ಲಿ ಭಾರತ ಸೋತಿದ್ದು ಇದು ಕೇವಲ 8ನೇ ಬಾರಿ. ಕೊನೆಯ ಬಾರಿ ಇಂತಹ ಘಟನೆ ನಡೆದಿದ್ದು ಮಾರ್ಚ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ . ರಾಯ್ಪುರದಲ್ಲಿ ಕೊಹ್ಲಿ 93 ಎಸೆತಗಳಲ್ಲಿ 102 ರನ್ ಗಳಿಸಿ, ಋತುರಾಜ್ ಗಾಯಕ್ವಾಡ್ ಅವರೊಂದಿಗೆ 195 ರನ್‌ಗಳ ಬೃಹತ್ ಜೊತೆಯಾಟ ಆಡಿದರು . ಇವರಿಬ್ಬರ ಶತಕಗಳ ನೆರವಿನಿಂದ ಭಾರತ 358 ರನ್ ಕಲೆಹಾಕಿತಾದರೂ, ದಕ್ಷಿಣ ಆಫ್ರಿಕಾ 4 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.
ಇಬ್ಬನಿ ಮತ್ತು ಬೌಲಿಂಗ್ ವೈಫಲ್ಯ
ಭಾರತದ ಬೃಹತ್ ಮೊತ್ತಕ್ಕೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ಸಂಘಟಿತ ಹೋರಾಟ ಪ್ರದರ್ಶಿಸಿತು. ಏಡೆನ್ ಮಾರ್ಕ್ರಮ್ ಅವರ ಶತಕ ಮತ್ತು ಡೆವಾಲ್ಡ್ ಬ್ರೆವಿಸ್ ಅವರ 34 ಎಸೆತಗಳ 54 ರನ್ ಸ್ಫೋಟಕ ಬ್ಯಾಟಿಂಗ್ ಭಾರತದ ಕೈಯಿಂದ ಪಂದ್ಯವನ್ನು ಕಸಿದುಕೊಂಡಿತು . ಎರಡನೇ ಇನ್ನಿಂಗ್ಸ್‌ನಲ್ಲಿ ಮೈದಾನದಲ್ಲಿ ವಿಪರೀತ ಇಬ್ಬನಿ ಇದ್ದ ಕಾರಣ, ಭಾರತದ ಸ್ಪಿನ್ನರ್‌ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪರದಾಡಿದರು ಮತ್ತು ವೇಗಿಗಳ ಪ್ರದರ್ಶನದಲ್ಲಿ ನಿಖರತೆ ಇರಲಿಲ್ಲ.
ಕೊಹ್ಲಿ ಶತಕವಿದ್ದರೂ ಭಾರತ ಸೋತ ಪಂದ್ಯಗಳು
ವಿರಾಟ್ ಕೊಹ್ಲಿ ಶತಕ ಬಾರಿಸಿದಾಗ ಭಾರತ ಸೋಲುವುದು ಕ್ರಿಕೆಟ್ ಇತಿಹಾಸದಲ್ಲಿ ಬಹಳ ಅಪರೂಪದ ಸಂಗತಿಯಾಗಿದೆ. ಇಂತಹ ಘಟನೆ ನಡೆದಿರುವುದು ಕೇವಲ ಎಂಟು ಬಾರಿ ಮಾತ್ರ. 2011ರಲ್ಲಿ ಇಂಗ್ಲೆಂಡ್‌ನ ಕಾರ್ಡಿಫ್‌ನಲ್ಲಿ ಕೊಹ್ಲಿ 107 ರನ್ ಗಳಿಸಿದಾಗ ಭಾರತ ಮೊದಲ ಬಾರಿಗೆ ಈ ಕಹಿ ಅನುಭವಿಸಿತ್ತು. ತದನಂತರ 2014ರಲ್ಲಿ ನ್ಯೂಜಿಲೆಂಡ್‌ನ ನೇಪಿಯರ್‌ನಲ್ಲಿ 123 ರನ್ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ 117 ಮತ್ತು ಕ್ಯಾನ್ಬೆರಾದಲ್ಲಿ 106 ರನ್ ಬಾರಿಸಿದರೂ ಎರಡೂ ಪಂದ್ಯಗಳಲ್ಲಿ ಭಾರತ ಸೋಲೊಪ್ಪಿಕೊಂಡಿತ್ತು.
ಇದೇ ರೀತಿ 2017ರಲ್ಲಿ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ 121 ರನ್ ಹಾಗೂ 2018ರಲ್ಲಿ ಪುಣೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 107 ರನ್ ಗಳಿಸಿದಾಗಲೂ ಕೊಹ್ಲಿ ಆಟ ವ್ಯರ್ಥವಾಯಿತು. 2019ರ ಮಾರ್ಚ್‌ನಲ್ಲಿ ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 123 ರನ್ ಬಾರಿಸಿದ ಪಂದ್ಯದಲ್ಲಿ ಸೋತ ನಂತರ, ದೀರ್ಘಕಾಲದವರೆಗೆ ಕೊಹ್ಲಿ ಶತಕ ಬಾರಿಸಿದಾಗಲೆಲ್ಲಾ ಭಾರತ ಗೆಲ್ಲುತ್ತಿತ್ತು. ಆದರೆ ಇದೀಗ 2025ರ ಡಿಸೆಂಬರ್‌ನಲ್ಲಿ ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 102 ರನ್ ಗಳಿಸಿದರೂ ಭಾರತ ಸೋಲುವುದರೊಂದಿಗೆ ಆ ಅಜೇಯ ದಾಖಲೆ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ರಾಯ್ಪುರ ಸೋಲು : 359 ರನ್ ಗುರಿ ನೀಡಿದರೂ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕನ್ನಡಿಗ ಕೆ.ಎಲ್. ರಾಹುಲ್



















