ಬೆಂಗಳೂರು: ರಾಜ್ಯದ ಹಲವೆಡೆ ವ್ಯಾಪಕ ಮಳೆ (Rain)ಯಾಗುತ್ತಿದೆ. ಅದರಲ್ಲಿಯೂ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ವರುಣಾರ್ಭಟಕ್ಕೆ ಗುಡ್ಡ ಕುಸಿತ ಉಂಟಾಗಿದ್ದರೆ, ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜನ- ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೀಗಾಗಿ ಆಗಸ್ಟ್ 2ರಂದು ಕೂಡ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಾಳೆ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲೆ, PU ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಉಡುಪಿ ಡಿಸಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಆ. 2ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ ಹಾಗೂ ದಾಂಡೇಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.