ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ದಿಢೀರ್ ಸುರಿದ ಮಳೆಯಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.
ಹಾಸನ ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಮಳೆಯಾಗಿದ್ದು, ಬಿರುಗಾಳಿ, ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಗಿದೆ. ಬಿಸಿಲಿನ ತಾಪದಿಂದ ಕಾದಿದ್ದ ಭೂಮಿಗೆ ಮಳೆ ತಂಪು ನೀಡಿದರೂ, ಮೊದಲ ಮಳೆಯಲ್ಲೇ ಕೆಲವೆಡೆ ಅವಾಂತರಗಳು ಎದುರಾಗಿವೆ. ಚರಂಡಿಗಳು ಮುಚ್ಚಿ ಕೆಲ ಮನೆಗಳಿಗೆ ನೀರು ನುಗ್ಗಿದ ಘಟನೆಗಳು ವರದಿಯಾಗಿವೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲೂ ಗುಡುಗು ಸಹಿತ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಆಲಿಕಲ್ಲು ಮಳೆಯಾಗಿದ್ದು, ಹರಿಹರ ಪ್ರದೇಶದಲ್ಲಿ ಮಿಂಚು, ಗುಡುಗು ಸಹಿತ ಮಳೆ ಸುರಿದಿದೆ.
ಇನ್ನೂ ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲು ಬಡಿದು 15 ವರ್ಷದ ಬಾಲಕ ಮಂಜುನಾಥ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಯಲಬುರ್ಗಾ ತಾಲ್ಲೂಕಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಆಲಿಕಲ್ಲು ಮಳೆಯಿಂದ ಜಾನುವಾರುಗಳು ಸಹ ಸಂಕಷ್ಟ ಅನುಭವಿಸಿವೆ.
ಹಾವೇರಿ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಅರ್ಧ ಗಂಟೆ ಕಾಲ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿ ಜಮೀನಿನಲ್ಲಿದ್ದ ಜೋಳ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.
ಇದೇ ವೇಳೆ ಗಡಿ ಜಿಲ್ಲೆ ಬೀದರ್‌ನಲ್ಲೂ ಧಾರಾಕಾರ ಮಳೆಯಾಗಿದ್ದು, ಗುಡುಗು ಮತ್ತು ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಜನರು ಆತಂಕಗೊಂಡಿದ್ದಾರೆ. ಬೀದರ್, ಹುಮ್ನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.


















