ನವದೆಹಲಿ : ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದೆ. ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇತ್ತ ಪಂಜಾಬ್‌ನಲ್ಲಿ ನಾಳೆ( ಸೆ.3ರ) ತನಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನೋಯ್ಡಾ, ಗುರುಗ್ರಾಮ್ ಮತ್ತು ಗಾಜಿಯಾಬಾದ್ ಒಳಗೊಂಡಂತೆ ದೆಹಲಿ-ಎನ್ ಸಿಆರ್ ನಲ್ಲಿ ಇಂದೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಹರಿಯಾಣ, ದೆಹಲಿ ಭಾಗಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿಯಲ್ಲಿ ಯಮುನಾ ನದಿ ಹರಿಯುತ್ತಿದೆ. ನಿರಂತರ ಮಳೆ ಮುಂದುವರಿದರೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದ್ದು, ತಗ್ಗು ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಪಂಜಾಬ್‌ನಲ್ಲಿ ಈವರೆಗೂ 10 ಕ್ಕೂ ಹೆಚ್ಚು ಜಿಲ್ಲೆಗಳು ಜಲಾವೃತಗೊಂಡಿವೆ. ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್‌ನಾದ್ಯಂತ 1,300 ಕ್ಕೂ ಹೆಚ್ಚು ಗ್ರಾಮಗಳು ಮುಳುಗಿ ಹೋಗಿದ್ದು, 6,582 ಜನರನ್ನು 122 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಉತ್ತರ ಪ್ರದೇಶದ 22 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪ್ರತಾಪ್‌ಗಢ, ಸೋನ್‌ಭದ್ರ, ಮಿರ್ಜಾಪುರ್, ಭದೋಹಿ, ಜೌನ್‌ಪುರ್, ಹರ್ದೋಯಿ, ಫರೂಖಾಬಾದ್, ಕನೌಜ್, ಕಾನ್ಪುರ್ ಗ್ರಾಮಾಂತರ, ಬಾಗ್‌ಪತ್, ಮೀರತ್, ಅಲಿಗಢ, ಮಥುರಾ, ಹತ್ರಾಸ್, ಕಾಸ್‌ಗಂಜ್‌ನಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.