ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಅಬ್ಬರಿಸಿದ್ದ ಮಳೆರಾಯ ಮತ್ತೆ ಎಂಟ್ರಿ ಕೊಡುವ ಲಕ್ಷಣ ತೋರುತ್ತಿದ್ದಾನೆ.
ಶುಕ್ರವಾರ ಒಂದು ದಿನ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಹೀಗಾಗಿ ನಗರ ಜನರು ಪರದಾಡುವಂತಾಗಿದೆ. ಈ ಮದ್ಯೆ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆರಾಯ ಅಬ್ಬರಿಸುತ್ತಾನೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಡು ದಿನ ನಿರಂತರ ಮಳೆಯಿಂದಾಗಿ ಕಂಗಾಲಾಗಿದ್ದ ಬೆಂಗಳೂರಿಗರಿಗೆ ಮಳೆರಾಯ ಮತ್ತೆ ಕಾಟ ನೀಡಲು ಮುಂದಾಗಿದ್ದಾನೆ. ಶನಿವಾರ ರಾಜಧಾನಿಯಲ್ಲಿ ಮತ್ತೊಂದು ಸುತ್ತಿನ ದರ್ಶನ ನೀಡಿದ ವರುಣ, ಸಿಟಿ ಜನರಿಗೆ ಮತ್ತೆ ಆತಂಕ ಮೂಡಿಸಿದ್ದಾನೆ. ಕರಾವಳಿಯಲ್ಲಿ ಗಾಳಿಯ ವೇಗ ಕೂಡ ಹೆಚ್ಚಾಗಲಿದ್ದು, ಇನ್ನೆರಡು ದಿನಗಳ ಕಾಲ ರಾಜ್ಯದ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಭಾನುವಾರ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜಧಾನಿಯಲ್ಲೂ ಮಳೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನೂ ಎರಡು ದಿನ ರಾಜಧಾನಿ ಸೇರಿದಂತೆ ಹಲವೆಡೆ ವರುಣನ ಆಟ ಮುಂದುವರಿಯಲಿದೆ.