ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಇಂದಿನಿಂದ 4 ದಿನ ಹಲವೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾ. 27ರ ವರೆಗೆ ನಾಲ್ಕು ದಿನ ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೋಮವಾರ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಒಳನಾಡಿನ ಮೈಸೂರು ಹಾಗೂ ಉತ್ತರ ಒಳನಾಡಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಕರವಾಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಒಂದೇ ಮಳೆಗೆ ಜನರು ಹೈರಾಣಾಗಿ ಹೋಗಿದ್ದಾರೆ.
ರಾಜ್ಯದಲ್ಲಿ ಭಾನುವಾರ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 38.2 ಡಿ.ಸೆ ತಾಪಮಾನ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ದಲ್ಲಿ 17.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.