ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಬೇಸಿಗೆಕಾಲ ಆರಂಭವಾಗಿದ್ದು, ಬಿಸಿಲಿನ ಬೇಗೆಗೆ ಜನ ಬಸವಳಿದಿದ್ದಾರೆ. ಬಿಸಿಲಿನ ಝಳಕ್ಕೆ ಜನ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಹವಾಮಾನ ಇಲಾಖೆ ಗುಡ್‌ನ್ಯೂಸ್ ಒಂದನ್ನು ಕೊಟ್ಟಿದೆ. ಹವಾಮಾನ ಇಲಾಖೆಯು ರಾಜ್ಯದಲ್ಲಿ ಮಾರ್ಚ್ 12 ರಿಂದ 14 ರವರೆಗೆ ಮೂರು ದಿನಗಳ ಕಾಲ, ಮಳೆಯಾಗಲಿದೆ ಎಂಬ ಮುನ್ಸೂಚನೆ ಕೊಟ್ಟಿದೆ.
ಬಿಸಿಲಿನ ತಾಪಮಾನವನ್ನು ಕಡಿಮೆಗೊಳಿಸಲು ವರುಣ ಧರೆಗೆ ಬರಲಿದ್ದಾನೆ ಎಂಬ ಮಾಹಿತಿ ಕೊಟ್ಟಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಮುಂಗಾರು ರಾಜ್ಯಕ್ಕೆ ಜೂನ್ ತಿಂಗಳಲ್ಲೇ ಆಗಮಿಸಲಿದ್ದು, ಈಗ ಸುರಿಯುವ ಮಳೆ ಪೂರ್ವ ಮುಂಗಾರು ಅಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ಹೊರಡಿಸಿದೆ.