ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈಗ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ. ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ ಯೋಜನೆ ಅಡಿ 173 ಕಿ.ಮೀ. ಮಣ್ಣಿನ ಕಾಲುವೆಗಳಿಗೆ (Bangalore Canal) ಆರ್ಸಿಸಿ ತಡೆಗೋಡೆ ನಿರ್ಮಾಣ ಮಾಡಲು ಮುಂದಾಗಿದೆ. ಕಾಲುವೆಗಳ ಒತ್ತುವರಿ ತೆರವಿಗೆ ಪರಿಣಾಮಕಾರಿ ಕ್ರಮಕೈಗೊಳ್ಳಲು ಮುಂದಾಗಿದೆ.
ಮಹದೇವಪುರ ವಲಯದಲ್ಲಿ ನೀರಿನ ಪ್ರಮಾಣ ಶೇ 80 ರಷ್ಟು ಇಳಿಕೆಯಾಗಿದೆ. ಹಲವೆಡೆ ಪಂಪ್ ಸೆಟ್ ಮೂಲಕ ನೀರು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಆರ್ಆರ್ ನಗರ ವಲಯದ ಅಂದರಹಳ್ಳಿ ಜನನಿ ಶಾಲೆ ಬಳಿ ತಡೆಗೋಡೆ ದುರಸ್ತಿ, ವಿದ್ಯುತ್ ಕಂಬ ಸಹ ಹಾನಿಯಾಗಿದ್ದು, ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದೆ.
ಧಾರಾಕಾರ ಮಳೆಯ ಪರಿಣಾಮ ಪಾಲಿಕೆ ವ್ಯಾಪ್ತಿಯ 183 ಕೆರೆಗಳ ಪೈಕಿ 75 ಕೆರೆಗಳು ಭರ್ತಿಯಾಗಿದ್ದು, ಸೋಮವಾರ (ಮೇ.19) ಸುರಿದ ಮಳೆಗೆ 25 ಮರಗಳು ಹಾಗೂ 44 ಮರದ ರೆಂಬೆ ಕೊಂಬೆಗಳು ಧರೆಗೆ ಉರಿಳಿವೆ. ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 5.30ರ ವೇಳೆಗೆ 13.1 ಮಿಲಿ ಮೀಟರ್ ಮಳೆಯಾಗಿದೆ. ಹೆಚ್ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 4.8 ಮಿ.ಮೀ. ಮಳೆ ಸುರಿದಿದೆ. ಕೆಐಎಬಿ ಸುತ್ತಮುತ್ತ 4.8 ಮಿಲಿ ಮೀಟರ್ ಮಳೆ ದಾಖಲಾಗಿದೆ.



















