ಬೆಂಗಳೂರು; ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಮಾ ನದಿ ಪ್ರವಾಹದಿಂದ ಮಳೆಹಾನಿ ಸಂಭವಿಸಿದ್ದು, ಇದೀಗ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಹಾನಿಗೆ ಪರಿಹಾರ ಕೊಡಬೇಕು ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವರದಿಗಾರರ ಮುಂದೆ ಮಾತನಾಡಿದ ನಾರಾಯಣಸ್ವಾಮಿ, ಎಮ್ಮೆ ಚರ್ಮದ ಸರ್ಕಾರ ಮಳೆ ಬಂದರೆ ಇನ್ನಷ್ಟು ನಿದ್ದೆ ಮಾಡುತ್ತದೆ. ಊರಿಗೆ ಊರೇ ಹೊರಗೆ ಹೋಗಿ ಆಶ್ರಯ ಪಡೆಯುವ ಪರಿಸ್ಥಿತಿ ಮುಂದಾಗಿದೆ. ನಾವು ಪ್ರವಾಸ ಮಾಡಿದ ಕಾರಣ ಎಚ್ಚೆತ್ತುಕೊಂಡ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದರು. ನಾವು ರಸ್ತೆ ಮೂಲಕ ಜನರನ್ನು ತಲುಪಿದರೆ ಸಿಎಂ ವೈಮಾನಿಕವಾಗಿ ಹೋಗಿದ್ದಾರೆ. ಗುಂಡಿಯಲ್ಲಿ ರಸ್ತೆಗಳು ಬಿದ್ದು ಹೋಗಿರುವ ಪರಿಸ್ಥಿತಿ ಇದೆ. ರಸ್ತೆಗಳೇ ಇಲ್ಲದಿರುವಾಗ ಸಿಎಂ ಹೇಗೆ ರಸ್ತೆಯಲ್ಲಿ ಬಂದು ಸಮೀಕ್ಷೆ ಮಾಡಲು ಸಾಧ್ಯ ಅದಕ್ಕೆ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲಾ ಉಸ್ತುವಾರಿಯರ ಮೇಲೆ ವಾಗ್ದಾಳಿ ನಡೆಸಿ, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಸ್ಥಳೀಯರಲ್ಲ ಅವರೆಲ್ಲಾ ಬೆಂಗಳೂರಿನ ಎಸಿ ರೂಂನಲ್ಲಿ ಕುಳಿತಿರುವವರು. ಸಿಎಂ ಅವರೇ ಮೊದಲು ಇವರನ್ನು ಎಸಿ ರೂಂನಿಂದ ಹೊರ ತಳ್ಳಿ ಉತ್ತರ ಕರ್ನಾಟಕದಲ್ಲಿ ಎಲ್ಲಾ ಕಡೆ ಕಲುಷಿತ ನೀರಿನಲ್ಲಿ ತುಂಬಿ ಹೋಗಿದೆ ಎಂದು ತಿಳಿಸಿದ್ದಾರೆ.
ಸಿಎಂ ಮೊಮ್ಮಗ, ಮಹದೇವಪ್ಪ ನವರ ಮೊಮ್ಮಗ ಇವರಿಗೆಲ್ಲಾ ಗದ್ದೆ ಕೊಟ್ಟು ವಿಜೃಂಭಿಸುವ ಕೆಲಸ ಆಗುತ್ತಿದೆ. ಇವರಷ್ಟೇ ಲೂಟಿ ಮಾಡುತ್ತಿಲ್ಲ, ಮಕ್ಕಳಿಂದಲೂ ಲೂಟಿ ಮಾಡಿಸುತ್ತಿದ್ದಾರೆ. ಇವರಿಗೆ ಜನರ ಚಿಂತೆ ಇಲ್ಲ, ಮೊಮ್ಮಕ್ಕಳ ಚಿಂತೆ. ಇದು ರಿಯಲ್ ಎಸ್ಟೇಟ್ ಸರ್ಕಾರ ಆಗಿದೆ. ಬೆಂಗಳೂರು ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದಾರೆ. ನಾನೇ ಮುಂದೆ ಎರಡೂವರೆ ವರ್ಷ ಸಿಎಂ ಎಂದು ಇವರು, ಇಲ್ಲ ನವೆಂಬರ್ ನಲ್ಲಿ ನಾನು ಸಿಎಂ ಆಗುತ್ತೇನೆ ಎಂದು ಇನ್ನೊಬ್ಬರು ರಾಜ್ಯದಲ್ಲಿ ಮುಖ್ಯಮಂತ್ರಿ ದಂಧೆ ಆಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ವೋಟ್ ಚೋರಿ ಅಭಿಯಾನ ಹಿನ್ನೆಲೆ, ಇಲ್ಲಿಯವರೆಗೆ ವೋಟ್ ಚೋರಿ ಇರಲಿಲ್ಲ ಈಗ ಬೆಂಗಳೂರನ್ನು 5 ಭಾಗ ಮಾಡಿ ಈಗ ವೋಟ್ ಚೋರಿ ಶುರುವಾಗುತ್ತಿದೆ. ಪಾಪಾ ಒಳ್ಳೆಯ ವ್ಯಕ್ತಿಯನ್ನೇ ಅಭಿಯಾನಕ್ಕೆ ಕರೆಸಿದ್ದಾರೆ. ಸುರ್ಜೇವಾಲಾ ಇಷ್ಟು ದಿನ ಎಟಿಎಂ ನಡೆಸುತ್ತಿದ್ದರು. ಇನ್ನು ಅವರೇ ವೋಟ್ ಚೋರಿಯನ್ನೂ ಮಾಡುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿರುವ ಕಾರಣ ಲೋ ಕಮಾಂಡ್ ಗಳೆಲ್ಲಾ ಮಾತಾಡುತ್ತಿದ್ದಾರೆ. ಇಷ್ಟು ವೀಕ್ ಹೈಕಮಾಂಡ್ ಪಂಚಾಯತ್ ಮಟ್ಟದಲ್ಲೂ ಇರಲ್ಲ ಎಂದು ವ್ಯಂಗ್ಯವಾಡಿದ್ದಾರೆ.