ನವದೆಹಲಿ: ಕಳೆದ 11 ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಈಗ ಒಂದೇ ಆ್ಯಪ್ ನಲ್ಲಿ ಹತ್ತಾರು ಸೇವೆಗಳನ್ನು ನೀಡಲು ಆರಂಭಿಸಿದೆ. ರೈಲ್ವೆ ಇಲಾಖೆಯು “ರೈಲ್ ಒನ್” (RailOne) ಎಂಬ ಹೊಸ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಚಾಲನೆಯನ್ನೂ ನೀಡಲಾಗಿದೆ. ಗ್ರಾಹಕರು ಟಿಕೆಟ್ ಬುಕ್ಕಿಂಗ್ ನಿಂದ ಹಿಡಿದು ರೈಲುಗಳಲ್ಲಿ ಊಟ ಆರ್ಡರ್ ಮಾಡುವವರೆಗಿನ ಎಲ್ಲ ಸೇವೆಗಳು ಈ ಆ್ಯಪ್ ನಲ್ಲಿಯೇ ಸಿಗುತ್ತವೆ.
ಹೊಸ ಆ್ಯಪ್ ನಲ್ಲಿ ಏನೇನಿದೆ?
ಹತ್ತಾರು ಸೌಲಭ್ಯಗಳನ್ನು ಒಂದೇ ಆ್ಯಪ್ ಅಡಿಯಲ್ಲಿ ನೀಡಲು ರೈಲ್ವೆ ಇಲಾಖೆ ಕ್ರಮ ತೆಗೆದುಕೊಂಡಿದೆ. ರೈಲುಗಳ ಟಿಕೆಟ್ ಬುಕ್ಕಿಂಗ್, ಪಿ ಎನ್ ಆರ್ ಸ್ಟೇಟಸ್ ಟ್ರ್ಯಾಕಿಂಗ್, ರೈಲು ಎಲ್ಲಿದೆ ಎಂದು ತಿಳಿಯಲು ಟ್ರೈನ್ ಟ್ರ್ಯಾಕಿಂಗ್, ರೈಲಿನಲ್ಲಿ ಕೋಚ್ ಪೊಸಿಷನ್, ಪ್ಲಾಟ್ ಫಾರ್ಮ್ ಟಿಕೆಟ್ ಪಡೆಯುವುದು, ಊಟ ಬುಕ್ ಮಾಡುವುದು ಸೇರಿ ಹಲವು ಸೌಲಭ್ಯಗಳು ಒಂದೇ ಆ್ಯಪ್ ನಲ್ಲಿ ಸಿಗಲಿವೆ.
ಹೊಸ ಆ್ಯಪ್ ಅನ್ನು ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಷನ್ ಸೆಂಟರ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಹೊಸದಾಗಿ ಲಾಗ್ ಇನ್ ಆಗಬೇಕಿಲ್ಲ. ಹೊಸ ಪಾಸ್ ವರ್ಡ್ ಸೆಟ್ ಮಾಡಬೇಕಿಲ್ಲ. ಐಆರ್ ಸಿಟಿಸಿಯ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಗಳ ಮೂಲಕವೇ ಲಾಗ್ ಇನ್ ಆಗಬಹುದು. ಆ್ಯಂಡ್ರಾಯ್ಡ್ ಹಾಗೂ ಐಒಎಸ್ (ಆ್ಯಪಲ್ ಆ್ಯಪ್ ಸ್ಟೋರ್)ನಲ್ಲಿಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದಕ್ಕೂ ಮೊದಲು ಒಂದೊಂದು ಸೇವೆ ಒಂದೊಂದು ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಬೇಕಿತ್ತು. ಆದರೀಗ, ರೈಲ್ ಒನ್ ಅಪ್ಲಿಕೇಶನ್ ಉತ್ತಮ ಇಂಟರ್ಫೇಸ್ ಮೂಲಕ ಪ್ರಯಾಣಿಕರಿಗೆ ಒಂದು ವಿಶಿಷ್ಟವಾದ ಅನುಭವವನ್ನು ನೀಡುವುದು ರೈಲ್ ಒನ್ ಅಪ್ಲಿಕೇಶನ್ ನ ಮುಖ್ಯ ಗುರಿಯಾಗಿದೆ. ಇದು ವಿವಿಧ ಸೇವೆಗಳನ್ನು ಸಂಯೋಜಿಸುವ ಮೂಲಕ ಎಲ್ಲ ರೈಲ್ವೆ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.