ಬೆಂಗಳೂರು : ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಮಹಿಳೆಯರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರ ಇರುವ ಸ್ಯಾನಿಟರಿ ಪ್ಯಾಡ್ ಗಳ ಹಂಚಿಕೆ ವಿಚಾರ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.
ನಕಲಿ ಫೋಟೋ ಸೃಷ್ಟಿಸಿದ್ದಾರೆಂದು ಸದ್ಯ ಪ್ರಕರಣ ದಾಖಲಾಗಿದ್ದು, ರತನ್ ರಂಜನ್, ಅರುಣ್ ಕೊಸಿಲ್ ಎಂಬುವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಬಿಹಾರ ಮೂಲದ X ಖಾತೆದಾರರಾಗಿರುವ ಆರೋಪಿಗಳು, ರಾಹುಲ್ ಗಾಂಧಿ ಚಿತ್ರವನ್ನ ಮಾರ್ಪ್ ಮಾಡಿದ್ದಾರೆ, ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್ ಮೇಲೆ ಹಾಕಿದ್ದಾರೆ. ಇದರಿಂದ ಸುಳ್ಳು, ಮಾನಹಾನಿ, ಸ್ತ್ರೀ ದ್ವೇಷ ವಿಚಾರ ಪ್ರಕಟಿಸಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮಕ್ಕೆ ದೂರು ದಾಖಲಾಗಿದೆ. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ದೂರಿನ ಮೇರೆಗೆ ಎಫ್ ಐಆರ್ ದಾಖಲಾಗಿದೆ.
ಏನಿದು ಪ್ರಕರಣ ?
ಬಿಹಾರ ಕಾಂಗ್ರೆಸ್ ಘಟಕದಿಂದ ಈ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಸ್ಯಾನಿಟರಿ ಪ್ಯಾಡ್ ಗಳೊಳಗೆ ರಾಹುಲ್ ಗಾಂಧಿ ಅವರ ಚಿತ್ರ ಇರುವುದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಕೆಲ ನೆಟ್ಟಿಗರು ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಅವರ ಚಿತ್ರವನ್ನು ಮುದ್ರಿಸಲಾಗಿದೆ. ಆದರೆ ಸ್ಯಾನಿಟರಿ ಪ್ಯಾಡ್ ಮೇಲಿನ ಚಿತ್ರ ನಕಲಿ. ಅದನ್ನು ಎಡಿಟ್ ಮಾಡಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ವಾದಿಸುತ್ತಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಂತೆಯೇ ಕಾಂಗ್ರೆಸ್ ಪಕ್ಷ ಮಹಿಳಾ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ ಅವರ ಚಿತ್ರವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದೆ.
`ಪ್ರಿಯದರ್ಶಿನಿ ಉಡಾನ್ ಯೋಜನಾ’ ಎಂಬ ಈ ಯೋಜನೆಯಡಿ, ಬಿಹಾರದಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಈ ಯೋಜನೆಯು ಋತುಸ್ರಾವದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಬಿಹಾರ ಕಾಂಗ್ರೆಸ್‌ನ ಅಧ್ಯಕ್ಷ ರಾಜೇಶ್ ಕುಮಾರ್ ಅವರು ಶುಕ್ರವಾರ ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಕಾರ್ಯಕ್ರಮವನ್ನು ಮಹಿಳಾ ಕಾಂಗ್ರೆಸ್‌ನ ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದರು.