ನವ ದೆಹಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಪ್ರಮುಖ ಆಟಗಾರರೊಬ್ಬರು ಅಲಭ್ಯರಿರಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು ಐಪಿಎಲ್‌ನ ಮೊದಲ ಎರಡು ಪಂದ್ಯಗಳಿಗೆ ಗೈರಾಗಲಿದ್ದಾರೆ ಎಂಬ ಮಾಹಿತಿಯನ್ನು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಅಲಿಸಾ ಹೀಲಿ ಬಹಿರಂಗಪಡಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಪತ್ನಿಯಾಗಿರುವ ಹೀಲಿ ಅವರು ಒಂದು ಆನ್‌ಲೈನ್ ಸಂದರ್ಶನದಲ್ಲಿ ಮಾತನಾಡುವಾಗ – “ಹ್ಯಾರಿ ಬ್ರೂಕ್ ಈ ಬಾರಿ ಲಭ್ಯವಿಲ್ಲ. ಹಾಗಾಗಿ ಡೆಲ್ಲಿ ತಂಡ ಯಾರನ್ನು ಬದಲಿಗೆ ಆಯ್ಕೆ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಅಲ್ಲದೆ, ಕೆಎಲ್ ರಾಹುಲ್ ಅವರು ಮೊದಲ ಎರಡು ಪಂದ್ಯಗಳನ್ನು ಆಡಲಿಕ್ಕಿಲ್ಲವೆಂದು ನನಗೆ ಗೊತ್ತಿದೆ. ಅವರು ತಂದೆಯಾಗಲು ಕಾಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಕೆಎಲ್ ರಾಹುಲ್ ಹಾಗೂ ನಟಿ ಅತಿಯಾ ಶೆಟ್ಟಿ ಜೋಡಿ ಕಳೆದ ನವೆಂಬರ್‌ನಲ್ಲಿ ಗರ್ಭಧಾರಣೆಯ ಸುದ್ದಿ ಅಧಿಕೃತಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಎಲ್ ಆರಂಭದ ಕೆಲ ದಿನಗಳೊಳಗೆ ಕುಟುಂಬದ ಜವಾಬ್ದಾರಿ ನೆರವೇರಿಸುವ ಉದ್ದೇಶದಿಂದ ಅವರು ಪಂದ್ಯಗಳಿಂದ ನಿರ್ಗಮಿಸಬಹುದು ಎಂಬ ಅಂದಾಜು ಇದೆ.
ಡೆಲ್ಲಿ ತಂಡದಲ್ಲಿ ಹೊಸ ನಿರೀಕ್ಷೆ
ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಬಿಡುಗಡೆಗೊಂಡ ನಂತರ, ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ₹14 ಕೋಟಿಗೆ ಖರೀದಿಸಿತು. ಅಷ್ಟರ ಮಟ್ಟಿಗೆ ಅವರಿಗೆ ನಾಯಕತ್ವವೂ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಹುಲ್ ಸ್ವಯಂ ನಾಯಕತ್ವದಿಂದ ಹಿಂದೆ ಸರಿದ ಕಾರಣ, ಡೆಲ್ಲಿ ತಂಡ ಅಕ್ಷರ್ ಪಟೇಲ್ ಅವರ ಹೆಸರನ್ನು ನಾಯಕತ್ವಕ್ಕೆ ಮುಂದೂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಜೇಕ್ ಫ್ರೇಸರ್ ಮೆಕ್ಗುರ್ಕ್, ಹ್ಯಾರಿ ಬ್ರೂಕ್ ,ಕರುಣ್ ನಾಯರ್, ಸಮೀರ್ ರಿಜ್ವಿ, ಆಶುತೋಷ್ ಶರ್ಮ, ಮೋಹಿತ್ ಶರ್ಮ, ಮುಕೇಶ್ ಕುಮಾರ್, ಫಾಫ್ ಡು ಪ್ಲೆಸಿಸ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಶ್ಮಂತ ಚಮೀರ, ಡೊನೊವನ್ ಫೆರೀರ , ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಣ ವಿಜಯ್, ಮಾಧವ್ ತಿವಾರಿ.