ಬೆಂಗಳೂರು : ಆಗಸ್ಟ್ 4ಕ್ಕೆ ಲೋಕಾಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಚುನಾವಣಾ ಅಕ್ರಮ ಸೇರಿ ಹಲವು ವಿಚಾರದ ಬಗ್ಗೆ ಪ್ರತಿಭಟನೆ ನಡೆಸಲಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಕಪಟ ನಾಟಕವಾಡಲು ರಾಹುಲ್ ಗಾಂಧಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಬೆಂಗಳೂರಲ್ಲಿ ಪ್ರತಿಭಟನೆ ಮಾಡುತ್ತಾರೋ, ಪಾದಯಾತ್ರೆ ಮಾಡುತ್ತಾರೋ, ಧರಣಿ ಮಾಡುತ್ತಾರೋ ಗೊತ್ತಿಲ್ಲ. ಆದರೆ ಎಲ್ಲೋ ಒಂದು ಕಡೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನವರ ಪರಿಸ್ಥಿತಿ ಕಂಡು ಅಯ್ಯೋ ಪಾಪ ಅನ್ನಿಸುತ್ತೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗಿಲ್ಲ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿಲ್ಲ ಎಂದು ಹತಾಶೆಗೊಂಡಿದ್ದಾರೆ ಎಂದಿದ್ದಾರೆ.
ಈಗ ಕರ್ನಾಟಕದಲ್ಲಿ ಹೊಸದೊಂದು ಕಪಟ ನಾಟಕ ಮಾಡಲು ಬರುತ್ತಿದ್ದಾರೆ. ಇದರಿಂದ ರಾಹುಲ್ ಗಾಂಧಿಗೆ ಯಾವುದೇ ಪ್ರಯೋಜನ ಆಗಲ್ಲ. ದೇಶದಲ್ಲಿ ಕರ್ನಾಟಕ ಬಿಟ್ಟು ಬೇರೆ ಯಾವುದೇ ರಾಜ್ಯಗಳಲ್ಲಿ ರಾಹುಲ್ ಗಾಂಧಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದು ಮೂರ್ಖತನದ ಪರಮಾವಧಿ. ಕಾಂಗ್ರೆಸ್ ನವರು ಮೂರ್ಖರು ಎಂದಿದ್ದಾರೆ.
ಶೇ.100ರಷ್ಟು ದಾಖಲೆಗಳಿವೆ ಎಂದು ಹೇಳುವ ಬದಲು ಚುನಾವಣಾ ಆಯೋಗಕ್ಕೆ ಆ ದಾಖಲೆಗಳನ್ನು ನೀಡಿ. ಈ ರೀತಿ ಹುಚ್ಚಾಟ, ರಂಪಾಟ ಆಡ್ಕೊಂಡು, ಸಂವಿಧಾನದಂತಹ ಸಂಸ್ಥೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು ಅಕ್ಷಮ್ಯ ಅಪರಾಧ. ನಾವು ಅದಕ್ಕೆ ಯಾವ ರೀತಿಯ ತಂತ್ರಗಾರಿಕೆ ಮಾಡಬೇಕೋ ಅದನ್ನು ಮಾಡುತ್ತೇವೆ. ಬಿಜೆಪಿಯವರು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಅಂದರೆ ಅವಕಾಶ ನೀಡಲ್ಲ. ಅವರು ಬಂದಾಗ ನಾವು ಕೂಡ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.