ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇರಳದಲ್ಲಿ ನೀಡಿದ ಹೇಳಿಕೆಯೊಂದು ಈಗ ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ. ಆರ್‌ಎಸ್‌ಎಸ್ ಮತ್ತು ಸಿಪಿಎಂ ಎರಡನ್ನೂ ತಮ್ಮ ಸೈದ್ಧಾಂತಿಕ ವಿರೋಧಿಗಳು ಎಂದು ಸಮೀಕರಿಸಿ ರಾಹುಲ್ ಮಾತನಾಡಿದ್ದು, ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಒಂದಾದ ಎಡಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮೈತ್ರಿಕೂಟದ ಐಕ್ಯತೆಗೆ ಧಕ್ಕೆ ತರುವಂತಹ ಹೇಳಿಕೆ ಎಂದು ಎಡಪಕ್ಷಗಳ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಕೊಟ್ಟಾಯಂನಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಆರ್‌ಎಸ್‌ಎಸ್ ಮತ್ತು ಸಿಪಿಎಂ ಎರಡರ ವಿರುದ್ಧವೂ ಸೈದ್ಧಾಂತಿಕವಾಗಿ ಹೋರಾಡುತ್ತೇನೆ. ಅವೆರಡೂ ಜನರ ‘ಭಾವನೆ’ಗಳಿಗೆ ಬೆಲೆ ನೀಡಲ್ಲ. ರಾಜಕೀಯದಲ್ಲಿದ್ದರೆ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು, ಅವರ ಮಾತನ್ನು ಕೇಳಬೇಕು,” ಎಂದು ಹೇಳಿದ್ದರು. ಈ ಹೇಳಿಕೆಯೇ ಈಗ ವಿವಾದದ ಕೇಂದ್ರಬಿಂದುವಾಗಿದೆ.
ರಾಹುಲ್ ಗಾಂಧಿಯವರ ಈ ಹೇಳಿಕೆಯು, ‘ಇಂಡಿಯಾ’ ಮೈತ್ರಿಕೂಟದ ವರ್ಚುವಲ್ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಪಿಐ ನಾಯಕ ಡಿ. ರಾಜಾ ಅವರು ರಾಹುಲ್ ಗಾಂಧಿಯವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ, “ಎಡಪಕ್ಷಗಳನ್ನು ಆರ್‌ಎಸ್‌ಎಸ್‌ನೊಂದಿಗೆ ಸಮೀಕರಿಸುವ ಇಂತಹ ಹೇಳಿಕೆಗಳನ್ನು ತಪ್ಪಿಸಬೇಕು. ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತದೆ ಮತ್ತು ಮೈತ್ರಿಕೂಟದ ಏಕತೆಗೆ ಹಾನಿ ಮಾಡುತ್ತದೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿದ್ದ ಮತ್ತೊಬ್ಬ ನಾಯಕ, “ದೇಶ ಉಳಿಸಿ, ಬಿಜೆಪಿ ಓಡಿಸಿ ಎಂಬುದು ನಮ್ಮ ಒಕ್ಕೂಟದ ಮೂಲ ಘೋಷಣೆಯಾಗಿದ್ದು, ಆಂತರಿಕ ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳನ್ನು ಯಾರೂ ನೀಡಬಾರದು,” ಎಂದು ಒತ್ತಿ ಹೇಳಿದ್ದಾರೆ.
ಈ ವಿವಾದದ ಬಗ್ಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಪಿಎಂ ನಾಯಕ ಎಂ.ಎ. ಬೇಬಿ ಅವರು ರಾಹುಲ್ ಗಾಂಧಿಯವರ ಹೇಳಿಕೆಯನ್ನು “ದುರದೃಷ್ಟಕರ” ಎಂದು ಕರೆದಿದ್ದು, ಇದು ಕೇರಳ ಮತ್ತು ಭಾರತದ ರಾಜಕೀಯ ವಾಸ್ತವತೆಯ ಅರಿವಿಲ್ಲದೆ ನೀಡಿರುವ ಹೇಳಿಕೆಯಾಗಿದೆ ಎಂದು ಟೀಕಿಸಿದ್ದಾರೆ. “ಸಿಪಿಎಂ ಮತ್ತು ಆರ್‌ಎಸ್‌ಎಸ್ ಅನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು, ಈ ಎರಡೂ ಸಂಘಟನೆಗಳ ಪಾತ್ರದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದನ್ನು ತೋರಿಸುತ್ತದೆ,” ಎಂದು ಅವರು ಕಿಡಿಕಾರಿದ್ದಾರೆ.
ತಮ್ಮ ವೀಡಿಯೊ ಸಂದೇಶದಲ್ಲಿ, “2004ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಿಪಿಎಂ ಮತ್ತು ಇತರ ಎಡಪಕ್ಷಗಳ ಬೆಂಬಲವಿಲ್ಲದೆ ರಚನೆಯಾಗಲು ಸಾಧ್ಯವಿರಲಿಲ್ಲ ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿಕೊಳ್ಳಬೇಕು. ಆಗ ಕಾಂಗ್ರೆಸ್‌ಗೆ ಬಹುಮತವಿರಲಿಲ್ಲ,” ಎಂದು ಇತಿಹಾಸವನ್ನು ನೆನಪಿಸಿದ್ದಾರೆ. ಅಲ್ಲದೆ, “ರಾಹುಲ್ ಗಾಂಧಿ ವಯನಾಡ್‌ನಲ್ಲಿ ಸ್ಪರ್ಧಿಸಿದ್ದು ಆರ್‌ಎಸ್‌ಎಸ್ ಅಥವಾ ಬಿಜೆಪಿ ವಿರುದ್ಧವಲ್ಲ, ಬದಲಿಗೆ ಸಿಪಿಐ ಅಭ್ಯರ್ಥಿ (ಅನ್ನಿ ರಾಜಾ) ವಿರುದ್ಧ. ಅವರು ಸಿಪಿಎಂ ವಿರುದ್ಧ ಮಾತನಾಡುವಾಗ ಇನ್ನಷ್ಟು ಗಂಭೀರವಾಗಿ ಯೋಚಿಸಬೇಕು ಎಂದು ನಾನು ಆಶಿಸುತ್ತೇನೆ,” ಎಂದು ವ್ಯಂಗ್ಯವಾಡಿದ್ದಾರೆ.
“ನಾವು ಕಾಂಗ್ರೆಸ್ ಅನ್ನು ಆರ್ಥಿಕ ನೀತಿಗಳಂತಹ ವಿಷಯಗಳಲ್ಲಿ ಟೀಕಿಸಿದ್ದೇವೆ, ಆದರೆ ಅದನ್ನು ‘ಸ್ನೇಹಪರ’ವಾಗಿಯೇ ನೋಡಿಕೊಂಡಿದ್ದೇವೆ. ನಾವು ಎಂದಿಗೂ ಕಾಂಗ್ರೆಸ್ ಅನ್ನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಸಮೀಕರಿಸುವುದಿಲ್ಲ. ಆದರೆ ರಾಹುಲ್ ಗಾಂಧಿ ಅವರು ತೀರಾ ಸಹಜವೆಂಬಂತೆ ಸಿಪಿಎಂ ಅನ್ನು ಆರ್‌ಎಸ್‌ಎಸ್ ಜೊತೆ ಸೇರಿಸಿ ಸೈದ್ಧಾಂತಿಕ ಶತ್ರು ಎಂದು ಕರೆದಿರುವುದು ದುರದೃಷ್ಟಕರ,” ಎಂದು ಬೇಬಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಬದ್ಧ ರಾಜಕೀಯ ವೈರಿಗಳು. ಆದರೆ, ರಾಷ್ಟ್ರಮಟ್ಟದಲ್ಲಿ ಇಬ್ಬರೂ ಬಿಜೆಪಿ ವಿರುದ್ಧ ಹೋರಾಡಲು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯು ಕೇರಳದ ರಾಜಕೀಯ ಅನಿವಾರ್ಯತೆಯಿಂದ ಬಂದಿದ್ದರೂ, ಅದು ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದ ಐಕ್ಯತೆಗೆ ದೊಡ್ಡ ಪೆಟ್ಟು ನೀಡಿದೆ.



















