ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೆದುಳಿನಿಂದ ಚಿಪ್ ಕದಿಯಲಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ರಾಹುಲ್ ಗಾಂಧಿ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿದ್ದರು. ಅದಕ್ಕೆ ದಾಖಲೆಗಳನ್ನೂ ಕೂಡ ಬಿಡುಗಡೆ ಮಾಡಿದ್ದರು. ಆದರೆ, ಈ ಆರೋಪಕ್ಕೆ ಈಗ ಬಿಜೆಪಿ ಲೇವಡಿ ಮಾಡಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸಿದ್ದಾರೆ. ಇದು ಭಾರತದ ಸಂವಿಧಾನದ ವಿರುದ್ಧದ ಪಿತೂರಿಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂಬ ಆರೋಪಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಕಿಡಿಕಾರಿದ್ದಾರೆ. “ರಾಹುಲ್ ಗಾಂಧಿಯವರ ಮೆದುಳಿನಿಂದ ಚಿಪ್ ಕದಿಯಲಾಗಿದೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ಗಾಂಧಿಯ ಮೆದುಳಿನಲ್ಲಿ ಚಿಪ್ ಇದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ” ಎಂದು ವ್ಯಂಗ್ಯವಾಡಿದ್ದಾರೆ.
ಒಂದುವೇಳೆ ರಾಹುಲ್ ಗಾಂಧಿ ಹೇಳಿದಂತೆ ಚುನಾವಣೆಯಲ್ಲಿ ಅಕ್ರಮ ಅಥವಾ ನಕಲಿ ಮತದಾನ ನಡೆದಿದ್ದರೆ ಇದುವರೆಗೂ ಯಾರೂ ಯಾಕೆ ದೂರು ನೀಡಿಲ್ಲ? ಎಂದು ಬಿಜೆಪಿ ಪ್ರಶ್ನಿಸಿದೆ.



















