ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಕೆಳಜಾತಿಯವರಿಗೆ ತಾರತಮ್ಯ ಎಸಗಲಾಗುತ್ತಿದೆ ಎಂದು ಹೇಳುವ ಮೂಲಕ ಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾರತದಲ್ಲಿರುವ ಅಸಮಾನತೆಯ ಕುರಿತ ಸತ್ಯವನ್ನು ಹೊರತರಬೇಕೆಂದರೆ ಜಾತಿ ಜನಗಣತಿ(Caste Census) ಅತಿ ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ಅವರು, ಸಂಪನ್ಮೂಲಗಳ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ನಾವು ಹೋರಾಡುತ್ತೇವೆ ಎಂದೂ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, “ಭಾರತದ ಶಿಕ್ಷಣ ಕ್ಷೇತ್ರದಲ್ಲಿನ ಮೆರಿಟ್ ವ್ಯವಸ್ಥೆಯ ಬಗ್ಗೆ ರಾಹುಲ್ ಗಾಂಧಿಯವರ ಕೀಳುಮಟ್ಟದ ಮಾತುಗಳು ಅವರ ಪಕ್ಷದ “ವಂಶಪಾರಂಪರ್ಯ” ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ.
ಭಾರತದ ಶಿಕ್ಷಣ ವ್ಯವಸ್ಥೆಯು ಕೆಳಜಾತಿಗಳ ಪರವಾಗಿಲ್ಲ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಿ.ಆರ್.ಕೇಶವನ್, “ಅರ್ಹತೆಯ ಬಗ್ಗೆ ರಾಹುಲ್ ಗಾಂಧಿ ಅವರ ಆಘಾತಕಾರಿ ಹೇಳಿಕೆಯು ಕಾಂಗ್ರೆಸ್ನ ನಿರಂಕುಶ ಮತ್ತು ಊಳಿಗಮಾನ್ಯ ಮನಸ್ಥಿತಿಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ತಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಗತಿ ಸಾಧಿಸಿದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಅರ್ಹ ನಾಯಕರನ್ನು ವಂಶಾಡಳಿತಕ್ಕೆ ಒತ್ತು ನೀಡುವ ಕಾಂಗ್ರೆಸ್ ಯಾವಾಗಲೂ ಐತಿಹಾಸಿಕವಾಗಿ ನಿಂದಿಸುತ್ತಾ ಮತ್ತು ಅವಮಾನಿಸುತ್ತಾ ಬಂದಿದೆ” ಎಂದಿದ್ದಾರೆ. ಕಾಂಗ್ರೆಸ್ “ದಲಿತ ವಿರೋಧಿ” ಮನಸ್ಥಿತಿಯನ್ನು ಹೊಂದಿದ್ದು, ಅವರ ಅರ್ಹತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದೂ ಆರೋಪಿಸಿದ್ದಾರೆ.
ಯುಜಿಸಿಯ ಮಾಜಿ ಅಧ್ಯಕ್ಷ ಮತ್ತು ಶಿಕ್ಷಣ ತಜ್ಞ ಸುಖದೇವ್ ಥೋರಟ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮೆರಿಟ್ ಎಂಬ ಪರಿಕಲ್ಪನೆಯೇ ದೋಷಪೂರಿತವಾಗಿದೆ. ಇಲ್ಲಿ ನನ್ನ ಸಾಮಾಜಿಕ ಸ್ಥಾನ ಮತ್ತು ಸಾಮರ್ಥ್ಯದ ಬಗ್ಗೆಯೇ ಗೊಂದಲ ಸೃಷ್ಟಿಯಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಅಥವಾ ನಮ್ಮ ಅಧಿಕಾರಶಾಹಿ ಪ್ರವೇಶ ವ್ಯವಸ್ಥೆಗಳು ದಲಿತರು, ಒಬಿಸಿಗಳು (ಇತರ ಹಿಂದುಳಿದ ಜಾತಿಗಳು) ಮತ್ತು ಬುಡಕಟ್ಟು ಜನಾಂಗದವರಿಗೆ ನ್ಯಾಯಯುತವಾಗಿವೆ ಎಂದು ಯಾರಾದರೂ ಹೇಳಿದರೆ ಅದು ಸಂಪೂರ್ಣವಾಗಿ ಸುಳ್ಳು” ಎಂದಿದ್ದರು.
ಈ ವೇಳೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ರಾಹುಲ್, ಭಾರತದಲ್ಲಿ ಅಸಮಾನತೆಯ ವಾಸ್ತವತೆಯನ್ನು ಹೊರತರುವ ಜಾತಿ ಜನಗಣತಿಯ ಪರಿಕಲ್ಪನೆಯನ್ನು “ವಿರೋಧಿಸುವವರು” ಇದ್ದಾರೆ ಎಂದಿದ್ದಾರೆ. ಜತೆಗೆ “ಈ ಅಸಮಾನತೆಯ ಸತ್ಯವನ್ನು ಹೊರತರುವ ನಿಟ್ಟಿನಲ್ಲಿ ಜಾತಿಗಣತಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದರೆ ಅದರ ವಿರೋಧಿಗಳು ಈ ಸತ್ಯವನ್ನು ಹೊರಬರಲು ಬಿಡುವುದಿಲ್ಲ” ಎಂದಿದ್ದಾರೆ. ಬಾಬಾ ಸಾಹೇಬ್ ಅವರ ಕನಸು ಇನ್ನೂ ಅಪೂರ್ಣವಾಗಿದೆ. ಅವರ ಹೋರಾಟ ಕೇವಲ ಭೂತಕಾಲದ ಬಗ್ಗೆ ಮಾತ್ರವಲ್ಲ, ಅದು ವರ್ತಮಾನದ ಬಗ್ಗೆಯೂ ಆಗಿದೆ. ಅವರ ಕನಸನ್ನು ಈಡೇರಿಸಲು ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡಲಿದ್ದೇವೆ” ಎಂದೂ ರಾಹುಲ್ ಹೇಳಿದ್ದರು.