ನವದೆಹಲಿ: ರಾಹುಲ್ ಗಾಂಧಿ ಕಳೆದ ಬಾರಿ ರಾಜಕೀಯ ಜೀವನಕ್ಕೆ ನೀರು ಹಾಕಿದ್ದ ವಯನಾಡನ್ನು ಈ ಬಾರಿ ತೊರೆದಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡು ಹಾಗೂ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡರಲ್ಲಿಯೂ ಜಯ ಸಾಧಿಸಿದ್ದರು. ಹೀಗಾಗಿ ಒಂದು ಕ್ಷೇತ್ರ ಈಗ ತ್ಯಜಿಸಬೇಕಾಗಿದ್ದು, ರಾಯ್ ಬರೇಲಿ ಉಳಿಸಿಕೊಂಡು ವಯನಾಡು ತೊರೆಯಲು ಮುಂದಾಗಿದ್ದಾರೆ.
ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಪಾದರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕ್ಷೇತ್ರ ತೊರೆಯಲು ಜೂ. 17 ಕೊನೆಯ ದಿನವಾಗಿತ್ತು. ಹೀಗಾಗಿ ಇಂದು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಘೋಷಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಂಡಿದ್ದಾರೆ.
ಇತ್ತೀಚೆಗೆ ರಾಯ್ ಬರೇಲಿಯಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ರಾಹುಲ್ ಗಾಂಧಿ, ಯಾವ ಕ್ಷೇತ್ರ ತೊರೆಯಬೇಕೆಂಬ ಕುರಿತು ಗೊಂದಲದಲ್ಲಿದ್ದೇನೆ ಎಂದು ಹೇಳಿದ್ದರು.
ವಯನಾಡು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದ ಸಂದರ್ಭದಲ್ಲಿ ಕೂಡ ಮತದಾರರಿಗೆ ಧನ್ಯವಾದ ಅರ್ಪಿಸಿದ್ದರು. ವಯನಾಡು ಜನತೆ ಮತ್ತೆ ನನ್ನ ಕೈ ಹಿಡಿದಿದ್ದು, ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ ಎಂದಿದ್ದರು. ರಾಯಬರೇಲಿ ಗಾಂಧಿ ಕುಟುಂಬದ ಭದ್ರಕೋಟೆ. ಇಲ್ಲಿನ ಜನತೆಗೆ ಗಾಂಧಿ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹೀಗಾಗಿ ರಾಹುಲ್ ಈ ಕ್ಷೇತ್ರ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.