ನವದೆಹಲಿ: ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧದ ಮತಗಳ್ಳತನ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹೊಸ ಸುದ್ದಿಗೋಷ್ಠಿಯ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. 2024ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಗಂಭೀರ ಆರೋಪ ಮಾಡಿರುವ ರಾಹುಲ್, “ನಕಲಿ ಮತಗಳು” ಮತ್ತು ಅಂಚೆ ಮತಪತ್ರಗಳ “ಬೃಹತ್ ತಿರುಚುವಿಕೆ” ಮೂಲಕ ಬಿಜೆಪಿ ಈ ಚುನಾವಣೆಯನ್ನು ಗೆದ್ದಿದೆ ಎಂದು ಹೇಳಿದ್ದಾರೆ. “ಹರ್ಯಾಣದಲ್ಲಿ 25 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಬ್ರೆಜಿಲ್ ಮಾಡೆಲ್ 22 ಬಾರಿ ಮತದಾನ
ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಹರ್ಯಾಣ ಚುನಾವಣೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿದೆ. “ಒಬ್ಬ ಬ್ರೆಜಿಲಿಯನ್ ಮಾಡೆಲ್ ಹರ್ಯಾಣದ ಕನಿಷ್ಠ 10 ವಿವಿಧ ಬೂತ್‌ಗಳಲ್ಲಿ 22 ಬಾರಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರ ಫೋಟೋ ಒಂದೇ, ಆದರೆ, ಹೆಸರು ಮಾತ್ರ ಸೀಮಾ, ಸ್ವೀಟಿ, ಸರಸ್ವತಿ ಎಂದು ಒಂದೊಂದು ಕಡೆ ಒಂದೊಂದು ಬರೆಸಲಾಗಿದೆ. ಇದರರ್ಥ ಇದೊಂದು ಕೇಂದ್ರೀಕೃತ ಕಾರ್ಯಾಚರಣೆ. ಆ ಮಹಿಳೆಯ ಫೋಟೋ ಒಂದು ಸ್ಟಾಕ್ ಫೋಟೋ ಆಗಿದ್ದು, ಹರ್ಯಾಣದಲ್ಲಿ ಇಂತಹ 25 ಲಕ್ಷ ದಾಖಲೆಗಳಿವೆ,” ಎಂದು ಅವರು ಗಂಭೀರ ಆರೋಪ ಮಾಡಿದರು.
“ಸಮೀಕ್ಷೆಗಳು ಕಾಂಗ್ರೆಸ್‌ಗೆ ಪೂರಕವಾಗಿದ್ದವು”
“ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ 52 ರಿಂದ 62 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದವು, ಆದರೆ ಫಲಿತಾಂಶಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು,” ಎಂದು ರಾಹುಲ್ ಗಾಂಧಿ ಹೇಳಿದರು. “ಹರ್ಯಾಣದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಂಚೆ ಮತಗಳು ಸಾಮಾನ್ಯ ಮತಗಳ ಪ್ರವೃತ್ತಿಗೆ ಹೊಂದಿಕೆಯಾಗಲಿಲ್ಲ. ಕಾಂಗ್ರೆಸ್ ಕೇವಲ 22,000 ಮತಗಳಿಂದ ಸೋತಿದೆ, ಆದರೆ ಒಟ್ಟು ಮತಗಳ ವ್ಯತ್ಯಾಸ 1.18 ಲಕ್ಷ ಇತ್ತು,” ಎಂದು ಅವರು ವಿವರಿಸಿದರು.
“ಹರ್ಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನವಾಗಿದೆ. ಅಂದರೆ ಶೇ.12.5 ರಷ್ಟು ನಕಲಿ ಮತಗಳಿವೆ. ಸುಮಾರು 93,000 ವಿಳಾಸಗಳು ಅಮಾನ್ಯವಾಗಿವೆ,” ಎಂದು ಆರೋಪಿಸಿದ ಅವರು, ಮತದಾರರ ಡೇಟಾಗೆ ಪ್ರವೇಶವನ್ನು ನಿರ್ಬಂಧಿಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ದೂಷಿಸಿದರು.
ಹರ್ಯಾಣದಲ್ಲಿ ಸುಮಾರು 2 ಕೋಟಿ ಮತದಾರರಿದ್ದು, ಅದರಲ್ಲಿ 25 ಲಕ್ಷ “ನಕಲಿ” ಅಥವಾ ಅಮಾನ್ಯ ಮತದಾರರನ್ನು ಪಟ್ಟಿ ಮಾಡಲಾಗಿದೆ. “ಇದರರ್ಥ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ, ಅಂದರೆ ಶೇಕಡ 12.5 ರಷ್ಟು. ಇದರಲ್ಲಿ 5.21 ಲಕ್ಷ ನಕಲಿ ಮತದಾರರು, 93,174 ಅಮಾನ್ಯ ಮತದಾರರು, ಮತ್ತು 19.26 ಲಕ್ಷ ಬೃಹತ್ (bulk) ಮತದಾರರು ಸೇರಿದ್ದಾರೆ,” ಎಂದು ಅವರು ವಿವರಿಸಿದರು.
“ಶೇ. 100ರಷ್ಟು ಸಾಕ್ಷ್ಯ ನನ್ನ ಬಳಿ ಇದೆ”
“ನಾನು ಶೇ. 100 ರಷ್ಟು ಸಾಕ್ಷ್ಯಗಳೊಂದಿಗೆ ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇನೆ. ಈ ವ್ಯತ್ಯಾಸಗಳು ನಂಬಲಸಾಧ್ಯವಾಗಿವೆ. ಭಾರತದ ಯುವಜನತೆ, ವಿಶೇಷವಾಗಿ ಜೆನ್ ಝೀ, ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ಇದು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ್ದು,” ಎಂದು ರಾಹುಲ್ ಗಾಂಧಿ ಹೇಳಿದರು.
“ಕಾಂಗ್ರೆಸ್‌ನ ಭರ್ಜರಿ ಗೆಲುವನ್ನು ಸೋಲಾಗಿ ಪರಿವರ್ತಿಸಲು ಒಂದು ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿತ್ತು ಎಂಬುದು ನಮಗೆ ಖಚಿತವಾಗಿದೆ. ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಮುಖದಲ್ಲಿನ ನಗುವನ್ನು ಮತ್ತು ಅವರು ಮಾತನಾಡುತ್ತಿರುವ ‘ವ್ಯವಸ್ಥೆ’ಯನ್ನು ಗಮನಿಸಿ,” ಎಂದು ಹೇಳಿದ ರಾಹುಲ್ ಗಾಂಧಿ, ಬಿಜೆಪಿ ಈ ಹಿಂದೆ ನಡೆಸಿದ್ದ ಪತ್ರಿಕಾಗೋಷ್ಠಿಯ ಕ್ಲಿಪ್ ಅನ್ನು ಪ್ರದರ್ಶಿಸಿದರು.
“ಒಬ್ಬ ಮಹಿಳೆ 223 ಬಾರಿ ಮತದಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ತನಗೆ ಬೇಕಾದಷ್ಟು ಬಾರಿ ಮತ ಚಲಾಯಿಸಬಹುದು. ಅವರು ಎಷ್ಟು ಬಾರಿ ಮತ ಚಲಾಯಿಸಿದ್ದಾರೆ ಎಂಬ ಬಗ್ಗೆ ಚುನಾವಣಾ ಆಯೋಗದ ಬಳಿ ಡೇಟಾ ಇದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗವು ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಿದೆ,” ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಹಿಂದೆ ಬೆಂಗಳೂರಿನ ಮಹದೇವಪುರದಲ್ಲಿನ ಅಕ್ರಮಗಳನ್ನು “ಅಣುಬಾಂಬ್” ಎಂದು ಕರೆದಿದ್ದ ಕಾಂಗ್ರೆಸ್ ನಾಯಕ, ನಂತರ ಮತ ವಂಚನೆಗೆ ಸಂಬಂಧಿಸಿದಂತೆ “ಹೈಡ್ರೋಜನ್ ಬಾಂಬ್” ಸಾಕ್ಷ್ಯವನ್ನು ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದರು.
ಇದನ್ನೂ ಓದಿ : ಇತ್ತೀಚೆಗಷ್ಟೇ ಕಂಪನಿ ಕೆಲಸಕ್ಕೆ ಸೇರಿದ್ದೀರಾ? ಹಾಗಾದರೆ ಈ ಹೊಸ ಯೋಜನೆ ಬಗ್ಗೆ ತಿಳಿದುಕೊಳ್ಳಿ



















