ನವ ದೆಹಲಿ : ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನಡೆದ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ 22 ಮಕ್ಕಳನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ದತ್ತು ಪಡೆದಕೊಳ್ಳಲು ನಿರ್ಧರಿಸಿದ್ದಾರೆ.
ಈ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ, ಪಾಕಿಸ್ತಾನದ ಶೆಲ್ ದಾಳಿಯಲ್ಲಿ ತಮ್ಮ ಹೆತ್ತವರಿಬ್ಬರನ್ನೂ ಅಥವಾ ಕುಟುಂಬದ ಏಕೈಕ ಜೀವನಾಧಾರವನ್ನು ಕಳೆದುಕೊಂಡ ಪೂಂಚ್‌ನ 22 ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಗಾಂಧಿ ಭರಿಸಲಿದ್ದಾರೆ. ಈ ಮಕ್ಕಳು ಪದವಿ ಪಡೆಯುವವರೆಗೂ ಸಹಾಯ ಮುಂದುವರಿಯಲಿದೆ ಎಂದಿದ್ದಾರೆ.
“ಪಾಕಿಸ್ತಾನಿ ಶೆಲ್ ದಾಳಿಯಲ್ಲಿ (ಮೇ 7 ಮತ್ತು 10ರ ನಡುವೆ) ಪೂಂಚ್ ಮತ್ತು ರಾಜೌರಿಯಲ್ಲಿ ಬಹಳಷ್ಟು ಜನ ಸಾವನ್ನಪ್ಪಿದ್ದಾರೆ, ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ವಿನಾಶಕಾರಿ ಶೆಲ್ ದಾಳಿಯ ನಂತರ ರಾಹುಲ್ ಗಾಂಧಿ ಪೂಂಚ್‌ಗೆ ಭೇಟಿ ನೀಡಿ ದುಃಖಿತ ಕುಟುಂಬಗಳನ್ನು ಭೇಟಿ ಮಾಡಿದರು. ಅವರು ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ಶಾಲಾ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಲು ನಮಗೆ ಸೂಚಿಸಿದ್ದರು. ಅದಕ್ಕೆ ಅನುಗುಣವಾಗಿ ನಾವು ಅವರಿಗೆ ಪಟ್ಟಿಯನ್ನು ಸಲ್ಲಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಮೇ ತಿಂಗಳ ಆರಂಭದಲ್ಲಿ ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಹಾನಿಗೊಳಗಾದ ಕುಟುಂಬಗಳನ್ನು ಭೇಟಿ ಮಾಡಿದ್ದರು. ತಮ್ಮ ಭೇಟಿಯ ಸಮಯದಲ್ಲಿ ರಾಹುಲ್ ಗಾಂಧಿ ಶೆಲ್ ದಾಳಿಯನ್ನು ಒಂದು ದೊಡ್ಡ ದುರಂತ ಎಂದು ಕರೆದಿದ್ದರು. ಇದರಲ್ಲಿ ಅನೇಕ ಜೀವಗಳು ಬಲಿಯಾಗಿವೆ ಮತ್ತು ಗಮನಾರ್ಹ ಹಾನಿ ಸಂಭವಿಸಿದೆ ಎಂದು ಅವರು ಹೇಳಿದ್ದರು. ಉಗ್ರರಿಂದ ಹಾನಿಗೊಳಗಾದ ಸ್ಥಳಗಳ ಜನರ ಕಳವಳಗಳನ್ನು ಅರ್ಥಮಾಡಿಕೊಳ್ಳಲು ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಕೇಳಿಕೊಂಡಿದ್ದಾರೆ ಎಂದು ರಾಹುಲ್ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಹಲವಾರು ವಲಯಗಳಲ್ಲಿ ಪಾಕಿಸ್ತಾನ ಸೇನೆ ಭಾರೀ ಶೆಲ್ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆಯಿಂದ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ಸಿಕ್ಕಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿದ ಶೆಲ್ಲಿಂಗ್ ಮತ್ತು ಡ್ರೋನ್ ದಾಳಿಯಲ್ಲಿ 28 ನಾಗರಿಕರು ಸಾವನ್ನಪ್ಪಿದ್ದು, ಅದರಲ್ಲಿ ಪೂಂಚ್ ಜಿಲ್ಲೆಯೊಂದರಲ್ಲೇ 13 ನಾಗರಿಕರು ಸಾವನ್ನಪ್ಪಿದ್ದರು. ಮೇ 7ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಮಿಲಿಟರಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಶೆಲ್ಲಿಂಗ್‌ನ ತೀವ್ರತೆ ಹೆಚ್ಚಾಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು. ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಲಷ್ಕರ್-ಎ-ತೈಬಾದ ಬೇಸ್ ಮುರಿಡ್ಕೆ ಸೇರಿವೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯಾಕಾಂಡದ ಎರಡು ವಾರಗಳ ನಂತರ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗಿತ್ತು.