ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಮತ್ತು ಸಂಯೋಜಕ ರಘು ದೀಕ್ಷಿತ್ ಅವರು ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಕೊಳಲು ವಾದಕಿ, ಗಾಯಕಿ ಮತ್ತು ಗ್ರ್ಯಾಮಿ ನಾಮನಿರ್ದೇಶಿತ ಕಲಾವಿದೆ ವಾರಿಜಶ್ರೀ ವೇಣುಗೋಪಾಲ್ ಅವರನ್ನು ರಘು ದೀಕ್ಷಿತ್ ಅವರು ಮದುವೆಯಾಗಿದ್ದು, ಈ ಮೂಲಕ ಸಂಗೀತ ಲೋಕದ ಈ ಪ್ರತಿಭಾವಂತ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ವಿವಾಹದ ಕುರಿತಾದ ಸುಂದರ ಕ್ಷಣಗಳ ಚಿತ್ರಗಳನ್ನು ನಟಿ ಯಮುನಾ ಶ್ರೀನಿಧಿ ಸೇರಿದಂತೆ ಹಲವು ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ನವ ಜೋಡಿಗೆ ಹೃತ್ಪೂರ್ವಕ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ರಘು ದೀಕ್ಷಿತ್ ಅವರು ಜಾನಪದ ಹಾಡುಗಳಿಗೆ ಟ್ರೆಂಡಿಂಗ್ ಸ್ಪರ್ಶ ನೀಡುವ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅವರು ಈ ಹಿಂದೆ ಖ್ಯಾತ ನೃತ್ಯ ಕಲಾವಿದೆ ಮಯೂರಿ ಅವರೊಂದಿಗೆ ವೈವಾಹಿಕ ಜೀವನದಲ್ಲಿದ್ದರು. ಕಾರಣಾಂತರಗಳಿಂದ ಇಬ್ಬರೂ ವಿಚ್ಛೇದನ ಪಡೆದು ಬೇರೆಯಾಗಿದ್ದರು.
ಇದೀಗ ತಮ್ಮದೇ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಾರಿಜಶ್ರೀ ಅವರೊಂದಿಗಿನ ಗಾಢ ಸ್ನೇಹವು ಪ್ರೀತಿಯಾಗಿ ಬದಲಾಗಿ, ದಾಂಪತ್ಯಕ್ಕೆ ಕಾರಣವಾಗಿದೆ.



















