ಬೆಂಗಳೂರು : ಆಗಸ್ಟ್ 4 ರಂದು ಲೋಕಾಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಚುನಾವಣಾ ಅಕ್ರಮ ಸೇರಿ ಹಲವು ವಿಚಾರಗಳ ಕುರಿತು ಗಾರ್ಡನ್ ಸಿಟಿಯಲ್ಲಿ ಪ್ರತಿಭಟನೆಯನ್ನು ನಡೆಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುಂದಾಗಿದೆ.
ಪ್ರತಿಭಟನೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಪೂರ್ವಭಾವಿ ಸಿದ್ಧತಾ ಸಭೆಯನ್ನು ಕರೆದಿದ್ದಾರೆ. ಇಂದು ಸಂಜೆ 4.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಿದ್ದು, ಬೆಂಗಳೂರು ನಗರದ 5 ಡಿಸಿಸಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಮಂಡ್ಯ ಜಿಲ್ಲೆಗಳ ಮುಖಂಡರುಗಳ ಸಭೆ ಕರೆಯಲಾಗಿದೆ.
ಇನ್ನು ಸಭೆಯಲ್ಲಿ ಸಚಿವರು, ಡಿಸಿಸಿ ಅಧ್ಯಕ್ಷರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.