ಮುಂಬೈ ಇಂಡಿಯನ್ಸ್ ವಿರುದ್ಧದ ಸಿಎಸ್ಕೆ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದು ರಚಿನ್ ರವೀಂದ್ರ. ಆದರೆ, ಅವರು ಅಮೋಘ ಇನಿಂಗ್ಸ್ ಹೊರತಾಗಿಯೂ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಕಾರಣ ಕೇಳಿದರೆ ಕೆಲವರಿಗೆ ಖುಷಿಯಾಗಬಹುದು. ಇನ್ನೂ ಕೆಲವರಿಗೆ ಇದೆಂಥ ಅಭಿಮಾನ ಎಂದು ಅನಿಸಬಹುದು.
ರಚಿನ್ ಕೊನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ, ಅವರು ಆ ರೀತಿ ಮಾಡಬಾರದಾಗಿತ್ತು ಎಂದು ಸಿಎಸ್ಕೆ ಅಭಿಮಾನಿಗಳು ಅಂದುಕೊಂಡಿದ್ದಾರೆ. ಅವರು ಧೋನಿಗೆ ಸಿಕ್ಸರ್ ಬಾರಿಸಲು ಚಾನ್ಸ್ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಎಸ್ಕೆ ತಂಡಕ್ಕೆ 4 ರನ್ಗಳ ಅಗತ್ಯವಿದ್ದಾಗ ಎಂಎಸ್ ಧೋನಿ ಕ್ರೀಸ್ಗೆ ಬಂದಿದ್ದರು. ಆ ವೇಳೆ ಎಂಟು ಎಸೆತ ಬಾಕಿ ಇತ್ತು. ಸ್ಟ್ರೈಕ್ ತೆಗೆದುಕೊಂಡ ಧೋನಿ ಎರಡು ಎಸೆತ ಎದುರಿಸಿದರೂ ರನ್ ಬಾರಿಸಲಿಲ್ಲ. ಓವರ್ ಮುಗಿದ ಬಳಿಕ ರಚಿನ್ ಸ್ಟ್ರೈಕ್ ತೆಗೆದುಕೊಂಡರು. ಆದರೆ, ಸಿಕ್ಸರ್ ಬಾರಿಸಿ ಮ್ಯಾಚ್ ಮುಗಿಸಿದರು. ಇದು ಸಿಎಸ್ಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ. ಅವರು ಒಂದು ರನ್ ಓಡಿ ಸಿಕ್ಸರ್ ಬಾರಿಸಲು ಧೋನಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿಕೊಂಡಿದ್ದಾರೆ.
ಫ್ಯಾನ್ಸ್ ಸಂಭ್ರಮ
ರವಿಂದ್ರ ಜಡೇಜಾ ಔಟಾಗುತ್ತಿದ್ದಂತೆಯೇ ಚೆಪಾಕ್ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳ ಸಂಭ್ರಮ ಹೆಚ್ಚಾಯಿತು. ಧೋನಿ ಕಣಕ್ಕಿಳಿಯುತ್ತಾರೆ ಎಂದು. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಅಂದುಕೊಂಡರು. ಅಂತೆಯೇ ಆಯಿತು. ಧೋನಿ ಸಿಕ್ಸರ್ ಬಾರಿಸಿ ಪಂದ್ಯ ಫಿನಿಶ್ ಮಾಡಬೇಕು ಎಂಬುದು ಅಭಿಮಾನಿಗಳ ಇರಾದೆಯಾಗಿತ್ತು. ಆದರೆ, ಮೈದಾನದಲ್ಲಿ ನ್ಯೂಜಿಲೆಂಡ್ನ ಯುವ ಬ್ಯಾಟರ್ ರಚಿನ್ ರವೀಂದ್ರ ಕ್ರೀಸ್ಕಚ್ಚಿ ಆಡುತ್ತಿದ್ದರು. ಹೀಗಾಗಿ ಅವರೇ ಸಿಕ್ಸರ್ ಬಾರಿಸಿ ಪಂದ್ಯ ಫಿನಿಶ್ ಮಾಡಿದರು.
ರಚಿನ್ ವಿರುದ್ಧ ಕೋಪ
ಪಂದ್ಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಧೋನಿ ಅಭಿಮಾನಿಗಳ ಆರ್ಭಟ ಶುರುವಾಗಿದೆ. ತಂಡವನ್ನು ಜವಾಬ್ದಾರಿಯುತ ಆಟದೊಂದಿಗೆ ಗೆಲ್ಲಿಸಿದ ರಚಿನ್ ರವೀಂದ್ರ ವಿರುದ್ಧವೇ ಕೋಪ, ದ್ವೇಷದ ಸಂದೇಶಗಳು ಹರಿದಾಡುತ್ತಿವೆ. ಧೋನಿಗೆ ಸಿಕ್ಸರ್ ಬಾರಿಸಿ ಫಿನಿಶಿಂಗ್ಗೆ ಅವಕಾಶ ನೀಡಬೇಕಿತ್ತು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಹೀಗಾಗಿ ಧೋನಿ ಅಭಿಮಾನಿಗಳು ಇನ್ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ರಚಿನ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. “ನೀವು ಧೋನಿಗೆ ಏಕೆ ಸ್ಟ್ರೈಕ್ ನೀಡಲಿಲ್ಲ?” ಎಂದು ಹೆಚ್ಚಿನ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ರಚಿನ್ ಅವರನ್ನು ಅನ್ಫಾಲೊ ಮಾಡುವುದಾಗಿ ಹೇಳಿದ್ದಾನೆ. ಮತ್ತೊಬ್ಬ ಮುಂದಿನ ಪಂದ್ಯದಿಂದ ರಚಿನ್ ಕೈಬಿಡುವಂತೆ ಒತ್ತಾಯಿಸಿದ್ದಾನೆ.