ಭಾರತ ಹಾಗೂ ಬಾಂಗ್ಲಾದೇಶ ಮಧ್ಯೆ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಟೆಸ್ಟ್ ನ್ನು ಬಾರತ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಆಲ್ ರೌಂಡರ್ ಅಶ್ವಿನ್ ಆದ್ಭುತ ಆಟದಿಂದಾಗಿ ಭಾರತ ಗೆಲುವು ಸಾಧಿಸಿದೆ. ಈ ಮಧ್ಯೆ ಅಶ್ವಿನ್ ದಾಖಲೆಯೊಂದನ್ನು ಬರೆದಿದ್ದಾರೆ.
ಮೊದಲ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ ರವಿಚಂದ್ರನ್ ಅಶ್ವಿನ್ 6 ವಿಕೆಟ್ ಪಡೆದಿದ್ದಾರೆ. ಅಲ್ಲದೇ, ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶತಕ ಕೂಡ ಸಿಡಿಸಿ ಮಿಂಚಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ವಿಕೆಟ್ ಪಡೆಯದ ಅವರು, ಎರಡನೇ ಇನ್ನಿಂಗ್ಸ್ ನಲ್ಲಿ 88 ರನ್ ನೀಡಿ 6 ವಿಕೆಟ್ ಗಳಿಸಿದ್ದಾರೆ. ಈ ಮೂಲಕ ಸ್ಪಿನ್ನರ್ ಲೆಜೆಂಡ್ ಶೇನ್ ವಾರ್ನ್ ಅವರ ವಿಶ್ವ ದಾಖಲೆ ಸರಿಗಟ್ಟಿದ್ದಾರೆ.
ಬಾಂಗ್ಲಾ ವಿರುದ್ಧ 6 ವಿಕೆಟ್ ಪಡೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಪಡೆದ 2ನೇ ಬೌಲರ್ ಎಂಬ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ದಂತಕಥೆ ಶೇನ್ ವಾರ್ನ್ ಹೆಸರಿನಲ್ಲಿತ್ತು. 145 ಟೆಸ್ಟ್ ಪಂದ್ಯಗಳ 273 ಇನಿಂಗ್ಸ್ ಗಳಲ್ಲಿ ವಾರ್ನ್ ಒಟ್ಟು 37 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈಗ ಅಶ್ವಿನ್ ಈ ದಾಖಲೆ ಸರಿಗಟ್ಟಿದ್ದಾರೆ. 101 ಟೆಸ್ಟ್ ಪಂದ್ಯಗಳ 191 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ 37 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ ಅತ್ಯಧಿಕ ಬಾರಿ ಐದು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 133 ಟೆಸ್ಟ್ ಪಂದ್ಯಗಳ 230 ಇನಿಂಗ್ಸ್ 67 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಐತಿಹಾಸಿಕ ದಾಖಲೆಯಾಗಿದೆ.